

ಉಡುಪಿ: ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ (ರಾಷ್ಟ್ರೀಯ ಮಹಾಮಂತ್ರಿ)ಯಾಗಿ ಉಡುಪಿಯ ಪ್ರಮೋದ ಮಧ್ವರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ವಿಚಾರವಾಗಿ ವಿಜಯವಾಣಿಯೊಂದಿಗೆ ಮಾತನಾಡಿ, ಪಕ್ಷದ ಹೈಕಮಾಂಡ್, ರಾಜ್ಯ ಮುಖಂಡರ ಶಿಫಾರಸಿನ ಮೇರೆಗೆ ಬಿಜೆಪಿ ಇತರೆ ಹಿಂದುಳಿದ ವರ್ಗಗಳ ಮೋರ್ಚಾದ ಈ ಮಹತ್ತರ ಜವಾಬ್ದಾರಿ ಲಭಿಸಿದೆ. ಮುಖ್ಯವಾಗಿ ಬಿ.ಎಲ್. ಸಂತೋಷ, ಬಿ.ವೈ. ವಿಜಯೇಂದ್ರ ಹಾಗೂ ಸಂಘದ ಪರಿವಾರದ ಆಶೀರ್ವಾದದಿಂದ ಪಕ್ಷದಲ್ಲಿ ಮಹತ್ತರ ಸ್ಥಾನಮಾನ ಲಭಿಸಿದೆ. ನೀಡಿದ ಜವಾಬ್ದಾರಿಯನ್ನು ನನಗೆ ದೇವರು ಕೊಟ್ಟ ಶಕ್ತಿಯಲ್ಲಿ ಒಬಿಸಿ ಮೋರ್ಚಾದ ಉನ್ನತಿಗೆ ಕೆಲಸ ಮಾಡುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹಾಗೂ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್ ಪಾಲ್ ಮೌರ್ಯ ಸಲಹೆ-ಸೂಚನೆಯಂತೆ ಕಾರ್ಯ ನಿರ್ವಹಿಸುತ್ತೇನೆ. ವಿಶ್ವವೇ ಮೆಚ್ಚಿಕೊಂಡ ನಾಯಕ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಲಭಿಸಿದ ಈ ಮಹತ್ತರ ಹೊಣೆಯನ್ನು ಭಾರತೀಯ ಜನತಾ ಪಾರ್ಟಿಯ ಶ್ರೇಯಸ್ಸು ವರ್ಧಿಸಲು ಶ್ರಮಿಸುತ್ತೇನೆ ಎಂದರು.