

ಉಡುಪಿ: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್ ಇಲಾಖೆ ಜೊತೆ ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸಿದ 30 ಮಂದಿ ಗೃಹರಕ್ಷಕರನ್ನು ಪೊಲೀಸ್ ಇಲಾಖೆಗೆ ನಿಯೋಜಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಡೆದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ 30 ಹುದ್ದೆಗಳು ಶ್ರೀಘ್ರ ತೆರವಾಗಲಿದ್ದು, ಈ ಹಿನ್ನೆಲೆಯಲ್ಲಿ 30 ಮಂದಿಗೆ ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಅಕ್ಕ ಪಡೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನರಿಂದ ಮೆಚ್ಚುಗೆ ಪಡೆದಿದೆ. ಗೃಹರಕಕ್ಷಕರು ತಮ್ಮ ಮಾನಸಿಕ ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯ ವೃದ್ದಿಸಿಕೊಳ್ಳಲು ಕ್ರೀಡೆ ಸಹಾಯ ಮಾಡುತ್ತದೆ ಎಂದರು.
ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ಮಾತನಾಡಿ, 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕಾನೂನು ಸುವ್ಯವಸ್ಥೆ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ಪೊಲೀಸರಿಗೆ ಗೃಹರಕ್ಷಕ ದಳದ ಬೆಂಬಲ ಅತೀ ಅಗತ್ಯವಾಗಿದೆ. ರಾಷ್ಟ್ರ ಮೊದಲು ಎಂಬ ಭಾವನೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ಗೃಹರಕ್ಷಕದಳದ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸಂಪತ್ ಶೆಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕ ದಳದ ಸಮಾದೇಷ್ಟ ನಸೀಮ್ ತಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಸ್ವಾಗತಿಸಿದರು. ಬ್ರಹ್ಮಾವರ ಪಿಎಲ್ ಸಿ ಘಟಕ್ ಸ್ಟೀವನ್ ಪ್ರಕಾಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.