ಅಸಹಾಯಕರಿಗೆ ಸಹಾಯವೇ ದೇವರ ಪೂಜೆ

ಕ್ರಿಸ್ತರಾಜರ ಮಹೋತ್ಸವದ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಅಲಂಕೃತ ವಾಹನದಲ್ಲಿ ಪವಿತ್ರ ಪರಮ ಪ್ರಸಾದ ಹಿಡಿದು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಸಾಗಿದರು.
ಕ್ರಿಸ್ತರಾಜರ ಮಹೋತ್ಸವದ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಅಲಂಕೃತ ವಾಹನದಲ್ಲಿ ಪವಿತ್ರ ಪರಮ ಪ್ರಸಾದ ಹಿಡಿದು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಸಾಗಿದರು.
Published on: 

* ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅಭಿಪ್ರಾಯ

* ಕ್ರಿಸ್ತರಾಜರ ಮಹೋತ್ಸವ, ಪವಿತ್ರ ಪ್ರಸಾದದ ಮೆರವಣಿಗೆ

ಉಡುಪಿ: ಹಸಿದವರಿಗೆ ಅನ್ನ ನೀಡುವುದು, ನೊಂದವರಿಗೆ ಸಾಂತ್ವನ ಹೇಳುವುದು ಕೇವಲ ಸಹಾಯವಲ್ಲ. ಅದು ನೇರವಾಗಿ ದೇವರಿಗೆ ಸಲ್ಲಿಸುವ ಪೂಜೆಯಾಗಿದೆ. ಕಷ್ಟದಲ್ಲಿರುವವರಿಗೆ ದಯೆ ತೋರದಿದ್ದರೆ ನಾವು ಮಾಡುವ ಯಾವುದೇ ಪೂಜೆ, ಪುನಸ್ಕಾರಗಳಿಗೆ ಅರ್ಥವಿರದು. ಅಸಹಾಯಕರ ಕಣ್ಣೀರು ಒರೆಸುವುದರಿಂದ ಸಿಗುವ ಆತ್ಮತೃಪ್ತಿ ಮತ್ತು ದೇವರ ಆಶೀರ್ವಾದ ಎಂದಿಗೂ ಶಾಶ್ವತ ಎಂದು ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅಭಿಪ್ರಾಯಪಟ್ಟರು.

ಉಡುಪಿ ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ನಲ್ಲಿ ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ವಾರ್ಷಿಕ ಪವಿತ್ರ ಪರಮ ಪ್ರಸಾದದೊಂದಿಗೆ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವದ ನಿಮಿತ್ತ ಭಾನುವಾರ (ನ.22) ಆಯೋಜಿಸಿದ್ದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಸಹಾಯದಿಂದ ದೇವರ ಕೃಪೆ

ಪಾಂಬೂರು ಹೋಲಿ ಕ್ರಾಸ್​ ಚರ್ಚ್​ನ ಗುರು ಡಾ. ರೋಶನ್​ ಡಿಸೋಜಾ ಅವರು ಬೈಬಲ್​ ವಾಚನದ ಮೂಲಕ ಪ್ರವಚನ ನೀಡಿ, ಜೀವನದಲ್ಲಿ ಕ್ರಿಸ್ತರಂತೆ ಬಾಳಿದರೆ ನಾವು ಅರ್ಪಿಸುವ ಪರಮಪ್ರಸಾದ ಬಲಿಪೂಜೆಗೆ ನಿಜ ಅರ್ಥ ಬರುತ್ತದೆ. ಇತರರಿಗೆ ಸಹಾಯ, ಶಾಂತಿ, ಸಮಾಧಾನದಿಂದ ಬದುಕಿದರೆ ದೇವರ ಕೃಪೆ ಲಭಿಸಲು ಸಾಧ್ಯ ಎಂದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್​ ಜನರಲ್​ ಹಾಗೂ ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ ರೆಕ್ಟರ್​ ಮೊನ್ಸಿಂಜ್ಞೊರ್​ ಫ್ರಾನ್ಸಿಸ್​ ಲೂವಿಸ್​, ಸಹಾಯಕ ಧರ್ಮಗುರು ಕೆವಿನ್​ ಡಿಸೋಜಾ, ಕುಲಪತಿ ಸ್ಟೀವನ್​ ಡಿಸೋಜಾ ಹಾಗೂ ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಗುರುಗಳಾದ ಚಾರ್ಲ್ಸ್​ ಮಿನೇಜಸ್​, ಆಲ್ಬನ್​ ಡಿಸೋಜಾ, ಡೆನಿಸ್​ ಡೆಸಾ, ಮೌಂಟ್​ ರೋಸರಿ ಚರ್ಚ್​ನ ಗುರು ರೋಕ್​ ಡೇಸಾ, ಸಹಾಯಕ ಗುರು ರೋಹನ್​ ಮಸ್ಕರೇನ್ಹಸ್​, ಧಾರ್ಮಿಕ ಸಭೆಗಳ ಎಪಿಸ್ಕೋಪಲ್​ ವಿಕಾರ್​ ಜ್ಯೋ ತಾವ್ರೊ ಉಪಸ್ಥಿತರಿದ್ದರು.

ವಿಲ್ಸನ್​ ಡಿಸೋಜಾ ಧಾರ್ಮಿಕ ವಿಧಿಯ ಕಾರ್ಯಕ್ರಮ ನಿರೂಪಿಸಿದರು. ಶೋನ್​ ಸಾವಿಯೊ ಅಂದ್ರಾದೆ ಜಪಸರ ಪ್ರಾರ್ಥನೆ ನೆರವೇರಿಸಿದರು.

ಸಾರ್ವಜನಿಕ ಗೌರವ

ಬಲಿ ಪೂಜೆಯ ಬಳಿಕ ಮಿಲಾಗ್ರಿಸ್​ ಕ್ಯಾಥೆಡ್ರಲ್​ನಿಂದ ಆರಂಭಿಸಿ ಸಂತೆಕಟ್ಟೆ ಮೌಂಟ್​ ರೋಸರಿ ಚರ್ಚ್​ನ ವರೆಗೆ ಪವಿತ್ರ ಪರಮ ಪ್ರಸಾದವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಯಿತು. 3 ಸಾವಿರಕ್ಕೂ ಅಧಿಕ ಕ್ರೈಸ್ತ ವಿಶ್ವಾಸಿಗಳು, 70ಕ್ಕೂ ಅಧಿಕ ಧರ್ಮಗುರುಗಳು, 200ಕ್ಕೂ ಅಧಿಕ ಧರ್ಮ ಭಗಿನಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಲಂಕೃತ ವಾಹನದಲ್ಲಿ ಪವಿತ್ರ ಪರಮ ಪ್ರಸಾದ ಹಿಡಿದು ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಸಾಗಿದರು.