ಸಂಕೀರ್ತನೆಯಿಂದ ಭಗವಂತನ ಅನುಗ್ರಹ

ಉಡುಪಿಯ ರಾಜಾಂಗಣದಲ್ಲಿ 'ಶ್ರೀಮಧ್ವಾನುಗ್ರಹ' ಪ್ರಶಸ್ತಿ ಪ್ರದಾನಿಸಿ ವೇದವರ್ಧನ ಶ್ರೀ ಆಶೀರ್ವಚನ ನೀಡಿದರು. ಕೆ.ಪಿ. ಕುಮಾರಗುರು ತಂತ್ರಿ, ಡಾ. ವಂಶಿಕೃಷ್ಣ ಆಚಾರ್ಯ, ಅರವಿಂದ ಆಚಾರ್ಯ, ಕೃಷ್ಣಮೂರ್ತಿ ಆಚಾರ್ಯ, ಪದ್ಮಲತಾ ವಿಷ್ಣು, ಜಯರಾಮ ಆಚಾರ್ಯ ಇದ್ದರು.
ಉಡುಪಿಯ ರಾಜಾಂಗಣದಲ್ಲಿ 'ಶ್ರೀಮಧ್ವಾನುಗ್ರಹ' ಪ್ರಶಸ್ತಿ ಪ್ರದಾನಿಸಿ ವೇದವರ್ಧನ ಶ್ರೀ ಆಶೀರ್ವಚನ ನೀಡಿದರು. ಕೆ.ಪಿ. ಕುಮಾರಗುರು ತಂತ್ರಿ, ಡಾ. ವಂಶಿಕೃಷ್ಣ ಆಚಾರ್ಯ, ಅರವಿಂದ ಆಚಾರ್ಯ, ಕೃಷ್ಣಮೂರ್ತಿ ಆಚಾರ್ಯ, ಪದ್ಮಲತಾ ವಿಷ್ಣು, ಜಯರಾಮ ಆಚಾರ್ಯ ಇದ್ದರು.
Published on: 

* ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಚನ

* ಸ್ಪರ್ಧೆ ಉದ್ಘಾಟನೆ, 'ಶ್ರೀಮಧ್ವಾನುಗ್ರಹ' ಪ್ರಶಸ್ತಿ ಪ್ರದಾನ

ಉಡುಪಿ: ಭಗವಂತನ ಪ್ರೀತಿ ಗಳಿಕೆಗಾಗಿ ಕಾರ್ತಿಕ ಮಾಸದಲ್ಲಿ ಆತನ ಸಂಕೀರ್ತನೆ ಮಾಡಲಾಗುತ್ತದೆ. ಯಾವುದೇ ವಿಚಾರವನ್ನು ಸ್ಪರ್ಧೆಯಾಗಿಸಿದಾಗ ಅದಕ್ಕೆ ಮಹತ್ವ ಹೆಚ್ಚುತ್ತದೆ. ಹುಮ್ಮಸ್ಸು ಬರುತ್ತದೆ. ತುಳಸೀ ಸಂಕೀರ್ತನೆಯಲ್ಲಿ ಸ್ಪರ್ಧಿಸಿದವರೆಲ್ಲರಿಗೂ ಪ್ರಥಮ ಬಹುಮಾನ ಸಿಗಲಾರದು. ಆದರೆ, ಎಲ್ಲರಿಗೂ ಭಗವಂತನ ಕರುಣೆ, ಅನುಗ್ರಹ ಲಭಿಸುತ್ತದೆ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಮಹಾಮಂಡಳ (ರಿ.) ಉಡುಪಿ ವತಿಯಿಂದ ಶನಿವಾರ (ನ.29) ಆಯೋಜಿಸಿದ್ದ ತುಳಸೀ ಸಂಕೀರ್ತನಾ ಸ್ಪರ್ಧೆ ಹಾಗೂ ನಾಲ್ವರು ಸಾಧಕರಿಗೆ 'ಶ್ರೀಮಧ್ವಾನುಗ್ರಹ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಜ್ಞಾನ, ಭಕ್ತಿಯ ಪ್ರತೀಕ

ಜ್ಯೋತಿಷಿ ಹಾಗೂ ಆಗಮಶಾಸ್ತ್ರ ಪ್ರವೀಣರಾದ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ಮಾತನಾಡಿ, ತುಂಟ ಕೃಷ್ಣನ ಕಾಟ ತಾಳಲಾಗದೆ ತಾಯಿ ಯಶೋದಾ ಆತನನ್ನು ಹಗ್ಗದಿಂದ ಕಟ್ಟಿಹಾಕಲು ಎಷ್ಟೇ ಪ್ರಯತ್ನಪಟ್ಟರೂ ಆಗುತ್ತಿರಲಿಲ್ಲ. ಏಕೆಂದರೆ ಅವಳಿಗೆ ಪ್ರೀತಿ, ಮಮಕಾರ ಮಾತ್ರ ಇತ್ತು. ಆದರೆ, ಕೃಷ್ಣ ಕುರಿತಾಗಿ ಜ್ಞಾನ, ಭಕ್ತಿ ಇರಲಿಲ್ಲ. ಬಳಿಕ ಕೃಷ್ಣ ಸಹಕರಿಸಿದಾಗ ಹಗ್ಗದಿಂದ ಕಟ್ಟಲು ಸಾಧ್ಯವಾಗಿ, ದಾಮೋದರ ಎಂಬ ಹೆಸರು ಪಡೆದ. ಜನರಿಗಿರುವ ಜ್ಞಾನ, ಭಕ್ತಿಯ ಕೊರತೆಯನ್ನು ನೀಗಿಸುವ ಕಾಲವೇ ಕಾರ್ತಿಕ ಮಾಸವಾಗಿದೆ. ಶ್ರೀಕೃಷ್ಣನನ್ನು ಸ್ಮರಿಸಿ, ತುಳಸಿಯನ್ನು ಸಂಕೀರ್ತನೆ ಮಾಡುವುದೇ ಈ ಮಾಸದ ವಿಶೇಷತೆ ಎಂದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಖ್ಯಾತ ಪ್ರವಚನಕಾರ ವೇದಮೂರ್ತಿ ಅಡ್ವೆ ಲಕ್ಷ್ಮೀಶ ಆಚಾರ್ಯ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ.ಗೋಪಾಲ ಆಚಾರ್ಯ, ಉಡುಪಿ ಸಂಸ್ಕೃತ ಮಹಾ ಪಾಠಶಾಲೆಯ ಅಧ್ಯಾಪಕ ಡಾ. ಪಿ.ಅಜಿತಕುಮಾರ ಆಚಾರ್ಯ, ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪಿ.ಲಕ್ಷ್ಮೀನಾರಾಯಣ ಉಪಾಧ್ಯಾಯ ಇವರಿಗೆ ಶ್ರೀಗಳು 10,000 ನಗದು, ಶಾಲು-ಹಾರ ಸ್ಮರಣಿಕೆಗಳೊಂದಿಗೆ 'ಶ್ರೀಮಧ್ವಾನುಗ್ರಹ' ಪ್ರಶಸ್ತಿ ಪ್ರದಾನಿಸಿದರು.

ಪಲಿಮಾರು ಮಠದ ತತ್ತ್ವ ಸಂಶೋಧನಾ ಪರಿಷತ್​ನ ನಿರ್ದೇಶಕ ಡಾ. ವಂಶಿಕೃಷ್ಣ ಆಚಾರ್ಯ, ಮಹಾಮಂಡಳದ ಗೌರವಾಧ್ಯಕ್ಷ ಅರವಿಂದ ಆಚಾರ್ಯ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಮಹಾಮಂಡಳದ ಮಹಿಳಾ ವಿಭಾಗದ ಅಧ್ಯಕ್ಷೆ ಪದ್ಮಲತಾ ವಿಷ್ಣು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ತುಳು ಶಿವಳ್ಳಿ ಮಾಧ್ವ ಮಹಾಮಂಡಳದ ಅಧ್ಯಕ್ಷ ಜಯರಾಮ ಆಚಾರ್ಯ ಸ್ವಾಗತಿಸಿದರು. ಅಮಿತಾ ಕ್ರಮಧಾರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜೇತರಿಗೆ ಬಹುಮಾನ ವಿತರಣೆ

ರಾಜಾಂಗಣದಲ್ಲಿ ಬೆಳಗ್ಗೆ ಆಯೋಜಿಸಿದ್ದ ತುಳಸೀ ಸಂಕೀರ್ತನಾ ಸ್ಪರ್ಧೆಯನ್ನು ಶೀರೂರು ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಉದ್ಘಾಟಿಸಿದರು. ಜಯರಾಮ ಆಚಾರ್ಯ, ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಪದ್ಮಲತಾ ವಿಷ್ಣು, ರಘುಪತಿ ರಾವ್​, ಮಂಜುನಾಥ ರಾವ್​ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕುಂಜಾರುಗಿರಿ ಬಳಗ ಪ್ರಥಮ ಸ್ಥಾನ ಗಳಿಸಿತು. ಪಡುಬಿದ್ರಿ ತರಂಗಿಣಿ ತಂಡ ಹಾಗೂ ಪುತ್ತೂರು ಬ್ರಾಹ್ಮಣ ಸಂ ಪ್ರೋತ್ಸಾಹಕರ ಬಹುಮಾನ ಗಳಿಸಿತು. ಮಕ್ಕಳ ವಿಭಾಗದಲ್ಲಿ ಕರಂಬಳ್ಳಿ ಬ್ರಾಹ್ಮಣ ಮಹಾಸಭಾ (ಪ್ರ), ಕುಂಜಾರುಗಿರಿ ಬಳಗ (ದ್ವಿ), ಬೈಲೂರು ಬ್ರಾಹ್ಮಣ ಮಹಾಸಭಾ (ತೃ). ಮಹಿಳಾ ವಿಭಾಗದಲ್ಲಿ ಜಯದುರ್ಗಾ ಪರಮೇಶ್ವರಿ (ಪ್ರ), ಯುವ ಬ್ರಾಹ್ಮಣ ಪರಿಷತ್​ ಗುಂಡಿಬೈಲು (ದ್ವಿ), ಬೈಲೂರು ಬ್ರಾಹ್ಮಣ ಮಹಾಸಭಾ (ತೃ). ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.