ಮೂಲ ಸೌಕರ್ಯಕ್ಕೆ ನೀಡಿ 30 ಕೋಟಿ ರೂ. ಅನುದಾನ

ಉಡುಪಿ ನಗರದಲ್ಲಿ ಮೂಲ ಸೌಕರ್ಯಕ್ಕಾಗಿ 30 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶಾಸಕ ಯಶ್​ಪಾಲ್​ ಸುವರ್ಣ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಉಡುಪಿ ನಗರದಲ್ಲಿ ಮೂಲ ಸೌಕರ್ಯಕ್ಕಾಗಿ 30 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶಾಸಕ ಯಶ್​ಪಾಲ್​ ಸುವರ್ಣ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
Published on: 

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಒತ್ತಾಯ

* ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಮನವಿ

ಉಡುಪಿ: ಜಿಲ್ಲಾ ಕೇಂದ್ರವಾಗಿರುವ ಉಡುಪಿ ನಗರವು ಶೈಕ್ಷಣಿಕ, ಧಾರ್ಮಿಕ, ವೈದ್ಯಕೀಯ, ಬ್ಯಾಂಕಿಂಗ್​ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ. ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳ ಮೇಲೂ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ನಗರಸಭಾ ವ್ಯಾಪ್ತಿಯಲ್ಲಿ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 30 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶಾಸಕ ಯಶ್​ಪಾಲ್​ ಸುವರ್ಣ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಸಚಿವ ಯತೀಂದ್ರ ಅವರಿಗೆ ಮನವಿ ಅರ್ಪಿಸಿ ಮಾತನಾಡಿದ ಯಶ್​ಪಾಲ್​, ವಿವಿಧ ವಾರ್ಡ್​ಗಳಲ್ಲಿ ರಸ್ತೆ ನಿರ್ಮಾಣ, ನಿರ್ವಹಣೆ, ಚರಂಡಿ ಹಾಗೂ ಮಳೆನೀರು ಹರಿಯುವ ವ್ಯವಸ್ಥೆ, ಕಾಲುಸಂಕ, ತಡೆಗೋಡೆ, ದಾರಿದೀಪ ಸೇರಿದಂತೆ ಹಲವು ಮೂಲ ಸೌಕರ್ಯಗಳ ಅಗತ್ಯತೆಯಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಅಗತ್ಯವಿರುವ ಪ್ರದೇಶಗಳಲ್ಲಿ ತಡೆಗೋಡೆ ಮತ್ತು ಕಾಲುಸಂಕ ನಿರ್ಮಿಸಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಅವಶ್ಯಕವಾಗಿದೆ ಎಂದರು.

ಉಡುಪಿಯಲ್ಲಿ ಜನಸಂಖ್ಯೆ ಮತ್ತು ನಗರೀಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೀಮಿತ ಅನುದಾನದಲ್ಲಿ ಎಲ್ಲ ಅಗತ್ಯ ಕಾಮಗಾರಿ ಕೈಗೊಳ್ಳುವುದು ಕಷ್ಟವಾಗುತ್ತಿದೆ. ಸಾರ್ವಜನಿಕರಿಂದಲೂ ವಿವಿಧ ಸೌಕರ್ಯ, ಅಭಿವೃದ್ಧಿಗಾಗಿ ನಿರಂತರ ಬೇಡಿಕೆ ಬರುತ್ತಿದೆ. ಉಡುಪಿ ನಗರದ ಅಗತ್ಯತೆ ಪೂರೈಸಲು ಆದ್ಯತೆಯ ಆಧಾರದ ಮೇಲೆ ವಿಶೇಷ ಅನುದಾನದ ಅಗತ್ಯವಿದ್ದು, ಕೂಡಲೇ 30 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಬೇಕೆಂದು ಯಶ್​ಪಾಲ್​ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net