

ಕುಂದಾಪುರ: ಸುಗಂಧ ದ್ರವ್ಯಗಳ ಮಾರಾಟದ ಪಾಲುದಾರಿಕೆ ಸಂಸ್ಥೆಗೆ ಪಾಲುದಾರರು ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವುದಾಗಿ ನ್ಯಾಯಾಲಯದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ವಡೇರಹೋಬಳಿ ಗ್ರಾಮದ ಪಿ.ಶ್ಯಾಮ ಸುಂದರ ನಾಯಕ್(58) ಎಂಬುವರು ವಸಂತ ನಾಯಕ ಮತ್ತು ಗುರುದತ್ ಎಂಬುವರ ಪಾಲುದಾರಿಕೆಯಲ್ಲಿ 2000ನೇ ಇಸವಿಯಲ್ಲಿ ಸುಗಂಧ ದ್ರವ್ಯಗಳ ಮಾರಾಟದ ಪಾಲುದಾರಿಕೆ ಸಂಸ್ಥೆ ಪ್ರಾರಂಭಿಸಿದ್ದರು. ಬಳಿಕ ಗುರುದತ್ ಇನ್ನೊಂದು ಸಂಸ್ಥೆಯನ್ನು ನಡೆಸಿ ಶ್ಯಾಮ ಸುಂದರ ಅವರ ಅನುಮತಿ ಇಲ್ಲದೆ ಸಂಸ್ಥೆಯಿಂದ ಲಕ್ಷಾಂತರ ಹಣವನ್ನು ತನ್ನ ಸಂಸ್ಥೆಗೆ ವರ್ಗಾಹಿಸಿಕೊಂಡಿದ್ದರು.
2020ರಲ್ಲಿ ಗುರುದತ್ ಅವರು ವೀಣಾ ಎಂಬುವರೊಂದಿಗೆ ಸೇರಿ ಶ್ಯಾಮ ಸುಂದರ ಅವರ ಅನುಮತಿ ಇಲ್ಲದೆ ಇನ್ನೊಂದು ಸಂಸ್ಥೆ ತೆರೆದು ಇವರ ವ್ಯವಹಾರದ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದು, ಕೆನರಾ ಬ್ಯಾಂಕ್ ಖಾತೆಯಿಂದ 1 ಕೋಟಿ 8 ಲಕ್ಷ ರೂ. ಅವರ ಸಂಸ್ಥೆಯ ಖಾತೆಗೆ ವರ್ಗಾಹಿಸಿಕೊಂಡು, ಗುರುದತ್ ಮತ್ತು ವೀಣಾ ಅವರು ನಂಬಿಕೆ ದ್ರೋಹ ಎಸಗಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.