ಶೂಟೌಟ್‌ಗೆ ಗ್ರಾಪಂ ಮಾಜಿ ಅಧ್ಯಕ್ಷ ಬಲಿ

ಗುಂಡಿಕ್ಕಿ ಹತ್ಯೆ
ಗುಂಡಿಕ್ಕಿ ಹತ್ಯೆ
Published on

ವಿಜಯವಾಣಿ ಸುದ್ದಿಜಾಲ ಶಿರ್ವ

ಕಾಪು ತಾಲೂಕಿನ ಮುದರಂಗಡಿ ಪೇಟೆಯ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಬಳಿ ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ(55) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಶುಕ್ರವಾರ ಮಧ್ಯಾಹ್ನ 3.50ರ ವೇಳೆಗೆ ಡೇವಿಡ್ ಡಿಸೋಜ ಅವರು ಮುದರಂಗಡಿಯಲ್ಲಿರುವ ಅವರ ಆಫೀಸಿನಿಂದ ಹೊರಗೆ ಬಂದು ಕಾರಿನಲ್ಲಿ ಕುಳಿತುಕೊಳ್ಳುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ಗುಂಡಿಕ್ಕಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಎಂದಿನಂತೆ ಮಧ್ಯಾಹ್ನದ ವೇಳೆ ಕಚೇರಿಗೆ ಬಂದು ಹೋಗುವ ಡೇವಿಡ್ ಅವರು ಶುಕ್ರವಾರವೂ ಕಚೇರಿಗೆ ತೆರಳಿ ಬಳಿಕ ಕಚೇರಿ ಕಾರ್ಯ ಚಟುವಟಿಕೆಯನ್ನು ನೋಡಿ ಮರಳಿ ಮನೆಯತ್ತ ತೆರಳಲು ಕಾರು ಹತ್ತುವ ವೇಳೆಗೆ ಮೊದಲೇ ಹೊಂಚು ಹಾಕುತ್ತಿದ್ದ ಇಬ್ಬರು ದುಷ್ಕರ್ಮಿಗಳ ಪೈಕಿ ಓರ್ವ ಕಾರಿನ ಎಡ ಭಾಗದಿಂದ ಬಂದು ಕಾರಿನಲ್ಲಿ ಕುಳಿತುಕೊಳ್ಳುವ ವೇಳೆ ಶೂಟ್ ವಾಡಿದ್ದಾನೆ. ಭುಜದ ಭಾಗಕ್ಕೆ ತಾಗಿದ ಕೂಡಲೇ ಕಾರಿನಿಂದ ಹೊರಬಂದ ಡೇವಿಡ್ ಅವರ ಹಣೆಗೆ ನೇರವಾಗಿ ಹತ್ತಿರದಿಂದಲೇ ಗುಂಡು ಹಾರಿಸಿದ್ದಾನೆ. ಕೂಡಲೇ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ಡೇವಿಡ್ ಕಾರು ಹತ್ತುವ ವೇಳೆಗೆ ಅವರ ಕಾರಿನಲ್ಲಿ ಫೈಲ್ ಹಿಡಲು ಬಂದ ಕಚೇರಿಯ ಮಹಿಳಾ ಸಿಬ್ಬಂದಿ ಬೊಬ್ಬೆ ಹೊಡೆದಾಗ ಸಿಬ್ಬಂದಿಗೂ ಪಿಸ್ತೂಲ್ ತೋರಿಸಿ ಆರೋಪಿಗಳು ಬೈಕ್ ಏರಿ ಪರಾರಿಯಾಗಿದ್ದಾರೆ.
ಆರೋಪಿಗಳು ಹತ್ಯೆ ವಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(ಐಜಿಪಿ) ಅಧಿಕಾರಿ ಅಮಿತ್ ಸಿಂಗ್, ಉಡುಪಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಪೊಲೀಸ್ ಉಪಾಧೀಕ್ಷ ಕೆ.ಯು.ಬೆಳ್ಳಿಯಪ್ಪ, ಕಾಪು ಸರ್ಕಲ್ ಅಝ್ಮತ್ ಅಲಿ, ಕಾರ್ಕಳ ಗ್ರಾವಾಂತರ ಠಾಣೆ ಎಸ್.ಐ.ಪ್ರಸನ್ನ, ಶಿರ್ವ ಠಾಣೆ ಎಸ್‌ಐ ಮಂಜುನಾಥ್ ಪಿ.ಮರಬದ, ಪಡುಬಿದ್ರೆ ಠಾಣೆ ಎಸ್‌ಐ ಶಕ್ತಿವೇಲು, ತೇಜಸ್ವಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಸ್ತೆಯಲ್ಲಿ ಬಿದ್ದ ಗುಂಡು

ಡೇವಿಡ್ ಅವರ ಮೇಲೆ ಒಟ್ಟು ಐದು ಭಾರಿ ೈರಿಂಗ್ ಆಗಿರುವ ಸಾಧ್ಯತೆಯಿದ್ದು, ಮೂರು ಭಾರಿ ಭುಜ, ಎದೆ ಹಾಗೂ ಹಣೆ ಮೇಲೆ ಫೈರ್ ಆಗಿದೆ. ಎರಡು ಭಾರಿ ಮಿಸ್ ಫೈರ್ ಆಗಿರುವ ಸಾಧ್ಯತೆಯಿದೆ. ಮಿಸ್ ಫೈರ್ ಆದ ಗುಂಡು ರಸ್ತೆಯಲ್ಲಿ ಬಿದ್ದಿದ್ದು ತನಿಖಾ ತಂಡ ವಶಕ್ಕೆ ಪಡೆದಿದೆ. ದುಷ್ಕರ್ಮಿಗಳು ಬೈಕ್‌ನಲ್ಲಿ ಮುಖ ಕಾಣುವಂತೆಯೇ ರಾಜಾರೋಷವಾಗಿ ಬಂದಿದ್ದು, ತಲೆಗೆ ಟೋಪಿ ಧರಿಸಿದ್ದರು ಎನ್ನಲಾಗಿದೆ.

ಪ್ರಭಾವಿ ವ್ಯಕ್ತಿ

ಡೇವಿಡ್ ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗುರುತಿಸಿಕೊಂಡು ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ವಾಡಿದ್ದು, ಸವಾಜಮುಖಿ ಕಾರ್ಯದಲ್ಲೂ ಗುರುತಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲೇ ಕುಂಜಿಗುಡ್ಡೆ ಪರಿಸರದಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತಿತ್ತು. ಅರ್ಥಿಕವಾಗಿ ದುರ್ಬಲರಾದವರಿಗೆ ಸಹಾಯ ಮಾಡುತ್ತಿದ್ದರು.

ಹಣದ ವಿಚಾರ ಕಾರಣ?

ಮುದರಂಗಡಿ, ಶಿರ್ವ ಪರಿಸರದಲ್ಲಿ ರಾಜಕೀಯವಾಗಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಡೇವಿಡ್, ಅದಾನಿ ಕಂಪನಿಯಲ್ಲಿ ಗುತ್ತಿಗೆದಾರರಾಗಿ, ಬಸ್ ವಾಲೀಕರಾಗಿ ಉದ್ಯಮ ನಡೆಸುತ್ತಿದ್ದರು. ಪೊಲೀಸರ ವಾಹಿತಿ ಪ್ರಕಾರ ಈ ಹತ್ಯೆ ಮೇಲ್ನೋಟಕ್ಕೆ ಹಣದ ವಿಚಾರವಾಗಿ ಇಲ್ಲವೇ ವೈಯಕ್ತಿಕ ದ್ವೇಷ ಅಥವಾ ಇತರ ಕಾರಣಗಳ ಹಿನ್ನೆಲೆಯಲ್ಲಿ ನಡೆದಿರಬಹುದು ಎಂದು ಅಂದಾಜಿಸಿದ್ದಾರೆ.

ಡೇವಿಡ್ ಮೇಲೆ 14 ಪ್ರಕರಣ

ಉಷ್ಣ ವಿದ್ಯುತ್ ಸ್ಥಾವರ ನಿರ್ವಾಣ ಸಂದರ್ಭ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದು, ಪ್ರತಿಭಟನೆ ಸೇರಿ ಇತರ ಒಟ್ಟು 14 ಪ್ರಕರಣಗಳು ಡೇವಿಡ್ ಡಿಸೋಜ ಮೇಲಿದೆ. ಹಿಂದೆ ರೌಡಿಶೀಟರ್ ಆಗಿದ್ದ ಎನ್ನಲಾಗಿದೆ. 2020ರಲ್ಲಿ ಶಿರ್ವ ಚರ್ಚ್ ಧರ್ಮಗುರು ಆತ್ಮಹತ್ಯೆ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಈ ಹಿಂದೆ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿದ ಬಗ್ಗೆಯೂ ಪ್ರಕರಣ ದಾಖಲಾಗಿದ್ದು, ಅವರ ಪಿಸ್ತೂಲನ್ನು ಪೊಲೀಸರು ಸೀಸ್ ವಾಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ನಾನು ಅಂಗಡಿ ಬಳಿ ಇರುವಾಗ ವಿಶ್ ವಾಡಿ ಕಾರಿನ ಕಡೆಗೆ ಹೋದರು. ಕೂಡಲೇ ಜೋರಾದ ಶಬ್ದ ಬಂತು. ಅವರ ಕಚೇರಿ ಸಿಬ್ಬಂದಿ ಬೊಬ್ಬೆ ಹೊಡೆದರು. ಏನಾಯಿತು ಎಂದು ಹೊರಗೆ ನೋಡುವಾಗ ಡೇವಿಡ್ ರಸ್ತೆಗೆ ಬಿದ್ದಿದ್ದರು. ರಕ್ತದ ಮಡುವಿನಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಪ್ರಯೋಜನವಾಗಿಲ್ಲ.

— ಪ್ರತ್ಯಕ್ಷದರ್ಶಿ

ಮೇಲ್ನೋಟಕ್ಕೆ ಹಣದ ವಿಚಾರವಾಗಿ ಇಲ್ಲವೇ ವೈಯಕ್ತಿಕ ದ್ವೇಷ ಅಥವಾ ಇತರ ಕಾರಣಗಳ ಹಿನ್ನೆಲೆಯಲ್ಲಿ ಕೃತ್ಯ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆ ಮುಂದುವರಿದಿದೆ. ಅರೋಪಿಗಳ ಪತ್ತೆಗಾಗಿ ಕ್ರಮ ಮುಂದುವರಿದಿದೆ.

— ಹರಿರಾಂ ಶಂಕರ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net