

ಉಡುಪಿ: ನಾಡಿನಲ್ಲಿ ಕವಿಗಳಿಗೆ ಬರಗಾಲವಿಲ್ಲ. ಯುವ ಕವಿ-ಕವಯಿತ್ರಿಗಳು ಹುಟ್ಟುತ್ತಲೇ ಇದ್ದಾರೆ. ಆದರೆ, ಹಿರಿಯ ಕವಿಗಳ ಬಗ್ಗೆ ಓದು ಇಲ್ಲ. ಬೇಂದ್ರೆ, ಕುವೆಂಪು, ಪುತಿನ ಸೇರಿದಂತೆ ಹಲವು ಹಿರಿಯ ಕವಿಗಳನ್ನು ಮರೆತಿದ್ದಾರೆ. ಅವರೆಲ್ಲರ ಕಾವ್ಯಾಧ್ಯಯನ ಮಾಹಿತಿ ಇಂದಿನ ತಲೆಮಾರಿಗಿಲ್ಲ. ಹಿಂದಣ ಹೆಜ್ಜೆ ಅರಿತು ಅವರ ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ಕನ್ನಡದ ಪ್ರಸಿದ್ಧ ವಿದ್ವಾಂಸ ಮಂಗಳೂರಿನ ಪ್ರೊ. ಎ.ವಿ. ನಾವುಡ ಕಿವಿಮಾತು ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ವಿಶ್ವಪ್ರಭಾ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ತಿಂಗಳ ಸಡಗರದ 'ಬಹುಭಾಷಾ ಕವಿಗೋಷ್ಠಿ' ಉದ್ಘಾಟಿಸಿ ಮಾತನಾಡಿದರು.
ಕಸಾಪ ಉಡುಪಿ ಘಟಕದ ಅಧ್ಯಕ್ಷ ರವಿರಾಜ ಎಚ್.ಪಿ. ಸಭಾಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಗೌರವ ಕಾರ್ಯದರ್ಶಿ ರಂಗಪ್ಪಯ್ಯ ಹೊಳ್ಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಂಸತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ ಶೆಣೈ, ಕವಿಗೋಷ್ಠಿಯ ಸಂಚಾಲಕ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.
ಅನಿರುದ್ಧ ಭಟ್ ಪಣಿಯಾಡಿ ಪ್ರಾರ್ಥಿಸಿದರು. ರಾಜೇಶ ಭಟ್ ಪಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ರಂಜನಿ ವಸಂತ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಹಾಗೂ ಸತೀಶ ಕೊಡವೂರು ಸಮಗ್ರ ನಿರ್ವಹಣೆ ಮಾಡಿದರು.
ಕವಿಗೋಷ್ಠಿಯಲ್ಲಿ 21 ಹಿರಿ-ಕಿರಿಯ ಕವಿಗಳು ಪಾಲ್ಗೊಂಡು ಕನ್ನಡ, ಸಂಸ್ಕೃತ, ತುಳು, ಕೊಂಕಣಿ, ಹಿಂದಿ, ಹವಿಗನ್ನಡ ಭಾಷೆಗಳಲ್ಲಿ ಸ್ವರಚಿತ ಕಾವ್ಯ ವಾಚಿಸಿದರು. ಅಂತಿಮ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಚಿಂತೆ ನಿವಾರಿಸಲು ಅನುಕೂಲವಾಗಲು ಮಣಿಪಾಲ ಟೌನ್ ರೋಟರಿ ಕ್ಲಬ್ನಿಂದ ಲೈಬ್ರರಿ ಆರಂಭಿಸುತ್ತಿದ್ದು, ಕಸಾಪ ಉಡಪಿ ಘಟಕದ 'ಮನೆಯೇ ಗ್ರಂಥಾಲಯ ಅಭಿಯಾನ'ದ 220ನೇ ಸಂಚಿಕೆಯನ್ನು ಆಶಾಲತಾ ಅವರಿಗೆ ಹಸ್ತಾಂತರಿಸಲಾಯಿತು.