

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಇಲ್ಲಿನ ಪುರಸಭೆ ವ್ಯಾಪ್ತಿಯ ಬಹದ್ದೂರ್ ಷಾ ವಾರ್ಡ್ನ ಸಂಗಮ್ ಸೇತುವೆ ಅಡಿಭಾಗದಲ್ಲಿನ ನದಿ ನೀರಿನಲ್ಲಿ ಕೆಂಪು ಬಣ್ಣದ ತ್ಯಾಜ್ಯ ನೀರು ಹರಿಯುವುದನ್ನು ಕಂಡು ಸ್ಥಳೀಯರು ಹಾಗೂ ಮೀನುಗಾರರು ಕಂಗಾಲಾಗಿದ್ದಾರೆ.
ಸಂಗಮ್ ಸೇತುವೆ ಕೆಳಗೆ(ರಿಂಗ್ ರಸ್ತೆ ಬಳಿ) ಪೈಪ್ ಮೂಲಕ ನದಿಯಲ್ಲಿ ಕಡು ಕೆಂಪು ಬಣ್ಣದ ಎಣ್ಣೆ ಪದಾರ್ಥದಂತಹ ಅಂಶ ಮಿಶ್ರಣವಾಗಿರುವ ತ್ಯಾಜ್ಯ ನೀರು ಅಡಿಯಿಂದ ಬುಗ್ಗೆಯಂತೆ ಎದ್ದು ಹರಿಯುತ್ತಿರುವುದನ್ನು ಗಮನಿಸಿದ ಮೀನುಗಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಸಂಗಮ್ ಸೇತುವೆ ಅಡಿಭಾಗದಲ್ಲಿನ ನದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜರಮೀನು ಕೃಷಿ ಮಾಡಿದ್ದು, ನೀರನ್ನು ಕಂಡು ಮೀನುಗಾರರು ಭೀತಿಗೊಂಡಿದ್ದಾರೆ. ಬಹುತೇಕ ಪಂಜರಗಳಿಗೆ ಮೀನು ಮರಿಗಳನ್ನು ಬಿಡಲಾಗಿದ್ದು, ಅವುಗಳು ಬೆಳವಣಿಗೆ ಹಂತದಲ್ಲಿವೆ. ಹಲವು ಪಂಜರಗಳಲ್ಲಿ ಹಾರ್ವೆಸ್ಟಿಂಗ್(ಕಟಾವು)ಗೆ ಸಿದ್ಧವಿರುವ ಮೀನುಗಳಿವೆ ಎಂದು ಪಂಜರ ಮೀನು ಕೃಷಿಕರಾದ ಚೇತನ ಖಾರ್ವಿ, ಶ್ರೀಕಾಂತ ಖಾರ್ವಿ, ರಾಜೇಶ್ ಖಾರ್ವಿ, ಸಂತೋಷ ಖಾರ್ವಿ, ದಯಾನಂದ ಖಾರ್ವಿ ತಿಳಿಸಿದ್ದಾರೆ.
ಕೈಯಿಂದ ಲಕ್ಷಾಂತರ ರೂ. ಹಣ ಹಾಕಿ ಪಂಜರ ಕೃಷಿ ಮಾಡಲಾಗುತ್ತಿದೆ. ರಾಸಯನಿಕ, ಮಲೀನಯುಕ್ತ ನೀರಿನ ಕಾರಣದಿಂದ ಪಂಜರದಲ್ಲಿರುವ ಮೀನು, ಮರಿಗಳಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿವೆ. ನೀರು ಗಬ್ಬು ನಾರುತ್ತಿದ್ದು ಪರಿಸರದ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ತಕ್ಷಣ ಸಂಬಂಧಪಟ್ಟವರು ಕ್ರಮ ವಹಿಸಬೇಕು. ಆಸ್ಪತ್ರೆ, ಹೋಟೆಲ್ ಸಹಿತ ಇತರ ತ್ಯಾಜ್ಯಗಳು ಸೇರಿರುವ ಸಾಧ್ಯತೆಗಳಿದ್ದು ಈ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಬೇಕು. ನದಿಗೆ ನೀರು ಬಿಡದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರಾದ ವಿಘ್ನೇಶ್ ಆಗ್ರಹಿಸಿದ್ದಾರೆ.