

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಪೈರು ಕಟವಾಗಿ ಇನ್ನೇನು ಸಾಗಿಸಬೇಕೆನ್ನುವಷ್ಟರಲ್ಲಿ ಹುಲ್ಲು ಗದ್ದೆಯಲ್ಲಿ ಕೊಳೆಯುತ್ತಿದೆ.
ತಾಲೂಕಿನಲ್ಲಿ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಕಟಾವು ಕೊನೆಯ ಹಂತದಲ್ಲಿದೆ. ಬೆಟ್ಟು ಪ್ರದೇಶದ ಗದ್ದೆಗಳಲ್ಲಿ ಮಾತ್ರ ಸದ್ಯಕ್ಕೆ ಒಣ ಹುಲ್ಲು ದೊರೆಯುತ್ತದೆ. ತೇವಾಂಶ ಹೆಚ್ಚಿರುವ ಜಾಗದಲ್ಲಿ ಹುಲ್ಲು ಸಂಪೂರ್ಣ ನಾಶವಾಗಿದೆ.
ತೇವಾಂಶ ಹೆಚ್ಚಾದ ಜಾಗದಲ್ಲಿ ಕಟಾವಿಗೆ ಸಮಸ್ಯೆಯಾಗಿದೆ. ಯಂತ್ರಗಳನ್ನು ಇಳಿಸಲು ಮಾಲೀಕರು ಒಪ್ಪುತ್ತಿಲ್ಲ. ಕೆಲವರು ಕಾರ್ಮಿಕರ ಮೂಲಕ ಕಟಾವಿಗೆ ಮೊರೆ ಹೋಗಿದ್ದಾರೆ. ಹುಲ್ಲು ಪಿಂಡಿ ಮಾಡುವ ಯಂತ್ರಗಳು ವಾಪಸ್ ಊರು ಸೇರುತ್ತಿವೆ.
ಈ ವರ್ಷ ಮಳೆ ಇಲ್ಲ ಎಂದು ಅನೇಕರು ಭತ್ತದ ಕೃಷಿ ಬಗ್ಗೆ ಯೋಚಿಸಲಿಲ್ಲ. ಕೆಲವರು ಬಿತ್ತನೆ ಮಾಡಿದ್ದಾರೆ. ಇನ್ನೇನು ಕಟಾವು ಮಾಡುವ ಎನ್ನುವಾಗ ಮಳೆಯಿಂದಾಗಿ ಇದ್ದ ಅಲ್ಪ ಸ್ವಲ್ಪ ಭತ್ತ ಅನೇಕ ಕಡೆ ಉದುರಿದೆ. ಕೊನೆಗೆ ಹುಲ್ಲಿಗೂ ಅಕಾಲಿಕ ಮಳೆಯಿಂದ ಅಭಾವ ಉಂಟಾಗಿದೆ.