

ಉಡುಪಿ: ಜ್ಞಾನ ಗಳಿಕೆ ಎಷ್ಟು ಮುಖ್ಯವೋ ಅದನ್ನು ಸರಿಯಾಗಿ ಬಳಸುವ ಹೊಣೆಗಾರಿಯೂ ಅಷ್ಟೇ ಮುಖ್ಯ. ಆರೋಗ್ಯ ಕ್ಷೇತ್ರ ಮತ್ತು ಸಮಾಜದಲ್ಲಿ ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ಎಐ ದೊಡ್ಡ ಬದಲಾವಣೆ ತರುತ್ತಿವೆ. ಇಂಥ ಸಂದರ್ಭದಲ್ಲಿ ಪದವೀಧರರು ಸಮಷ್ಟಿ ಭಾವದಲ್ಲಿ ಸಾಮಾಜಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಯುಕೆ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಉದ್ಯಮ ವಿಭಾಗದ ಸಹಕುಲಪತಿ ಪ್ರೊ. ಜೋ ರೆಕ್ರಾಫ್ಟ್-ಮೆಲೋನ್ ಒಬಿಇ ಕರೆ ನೀಡಿದರು.
ಉಡುಪಿ ಮಣಿಪಾಲದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ 34ನೇ ಘಟಿಕೋತ್ಸವದ ಮೂರನೇ ದಿನವಾದ ಶನಿವಾರ (ನ.21) 40 ಪಿಎಚ್.ಡಿ ಸಂಶೋಧಕರು ಸೇರಿದಂತೆ 1,468 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಷಣ ಮಾಡಿದರು.
ಮಾಹೆಗಿದೆ ಬದ್ಧತೆ
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ಮತ್ತಷ್ಟು ಪದವೀಧರರ ಸಾಧನೆಯ ಸಂಭ್ರಮವಿದು. ಅವರ ಶೈಕ್ಷಣಿಕ ಯಶಸ್ಸಿನ ಜತೆಗೆ ಭವಿಷ್ಯ ರೂಪಿಸುವ ಸಾಮರ್ಥ್ಯವನ್ನೂ ನಾವು ಗುರುತಿಸುತ್ತಿದ್ದೇವೆ. ಜ್ಞಾನ, ವೃತ್ತಿಪರತೆಯೊಂದಿಗೆ ಪ್ರಾಮಾಣಿಕತೆ, ಹೊಸ ಆಲೋಚನೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು ಮಾಹೆ ಬದ್ಧವಾಗಿದೆ ಎಂದರು.
ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಇನ್ನಿತರರು ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಧನೆ ಮಾಡಿದ ಐದು ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ 'ಡಾ. ಟಿಎಂಎ ಪೈ ಚಿನ್ನದ ಪದಕ' ಪ್ರದಾನ ಮಾಡಲಾಯಿತು. ಹಿಮಾಂಶಿ ಶಮಾರ್ (ಎಂಐಎಸ್ಎಚ್ಎ ಮಣಿಪಾಲ), ಅಭಿಶ್ರೀ ಅಯ್ಯಂಗಾರ್ (ಡಬ್ಲೂಜಿಎಸ್ಎಚ್ಎ), ಆಕಾಶ್ಕಾ ಕಲಾಂ (ಎಂಸಿಒಪಿಎಸ್ ಮಣಿಪಾಲ), ಸುಫಿಯಾ ತರಾನಮ್ (ಎಂಎಸ್ಐಎಸ್ ಮಣಿಪಾಲ), ಪೂರ್ಣಿಮಾ ಮನೋಜ (ಎಂಸಿಎಚ್ಪಿ ಮಣಿಪಾಲ) ಅವರನ್ನು ಗೌರವಿಸಲಾಯಿತು.