

ಉಡುಪಿ: ಅನೇಕರು ಆರಂಭದಲ್ಲಿಯೇ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳದೆ ದೃಷ್ಟೀಹಿನತ್ವ ಹೊಂದುತ್ತಾರೆ. ಹೀಗಾಗಿ ಆಗಾಗ ಕಣ್ಣಿನ ತಪಾಸಣೆ ಅತ್ಯಗತ್ಯ. ಉಡುಪಿಯ ಶಾಸಕರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದು, ಉಡುಪಿ ತಾಲೂಕನ್ನು ಅಂಧಮುಕ್ತ ಮಾಡುವ ನಿಟ್ಟಿನಲ್ಲಿ 'ಸರ್ವರಿಗೂ ನಯನ' ಎಂಬ ಸರಣಿ ಅಭಿಯಾನ ಉಚಿತ ಶಿಬಿರ ನಡೆಸಲು ನಿಶ್ಚಯಿಸಿದ್ದೇವೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ತಿಳಿಸಿದರು.
ಉಡುಪಿಯ ಬೈಲೂರು ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪಡುಬೈಲೂರಿನ ಇಷ್ಟಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್ನ 11ನೇ ವರ್ಷದ ಸೇವೆಯ ನಿಮಿತ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಉಡುಪಿ ಸಹಭಾಗಿತ್ವದಲ್ಲಿ ಶುಕ್ರವಾರ (ಅ.2) ಆಯೋಜಿಸಿದ್ದ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ತಂತ್ರಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿ ಮಾತನಾಡಿದರು. ದೇವಸ್ಥಾನದ ಮೊಕ್ತೇಸರ ಮೋಹನ್ ಮುದ್ದಣ್ಣ ಶೆಟ್ಟಿ, ತಂಡದ ಸಂಚಾಲಕ ನಾಗರಾಜ್ ಐತಾಳ್ ಉಪಸ್ಥಿತರಿದ್ದರು. ದೇವಸ್ಥಾನದ ಸಲಹಾ ಸಮಿತಿ ಸದಸ್ಯ ಹಾಗೂ ಹಿರಿಯ ವಕೀಲ ಮಟ್ಟಾರು ರತ್ನಾಕರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ವಿಭಾ ಆಚಾರ್ಯ ಪ್ರಾರ್ಥಿಸಿದರು. ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಶ್ರೀಮಧ್ವ ವಲ್ಲಭ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಹುಲಿವೇಷ ತಂಡದ ನಾಯಕ ಗೌತಮ್ ಕೆ.ಬಿ. ಕಾರ್ಯಕ್ರಮ ಸಂಯೋಜಿಸಿದರು.
ಶಿಬಿರದಲ್ಲಿ 180ಕ್ಕೂ ಅಧಿಕ ಜನರಿಗೆ ನೇತ್ರ ತಪಾಸಣೆ ನಡೆಸಿ, ಅಗತ್ಯ ಇರುವವರಿಗೆ ಔಷಧ ವಿತರಿಸಲಾಯಿತು. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸೌಲಭ್ಯ ಒದಗಿಸಲಾಯಿತು. ಆಯ್ಕೆಯಾದ ಫಲಾನುಭವಿಗಳಿಗೆ ಕನ್ನಡಕ ಉಚಿತ ವಿತರಣೆಗೆ ವ್ಯವಸ್ಥೆ ಮಾಡಲಾಯಿತು. ಹುಲಿವೇಷ ತಂಡದ ಸಂಚಾಲಕ ನಾಗರಾಜ್ ಐತಾಳ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ನೇತ್ರದಾನದ ಲಿಖಿತ ಪ್ರತಿಜ್ಞೆ ಮಾಡಿದರು.