ನಿವೃತ್ತ ನೌಕರರ ಅನುಭವ ಸಮಾಜಕ್ಕೆ ಸದ್ಬಳಕೆಯಾಗಲಿ

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯ
ex govt employee association meeting
ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ರಾಜಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂದ ವಾರ್ಷಿಕ ಮಹಾಸಭೆ ಉದ್ಘಾಟಿಸಿದರು.
Published on

ಉಡುಪಿ: ಸರ್ಕಾರಿ ನೌಕರಿ ಸಿಗುವುದು ಒಂದು ರೀತಿಯ ಯೋಗಾಯೋಗ. ನಿವೃತ್ತಿ ಜೀವನದಲ್ಲಿರುವ ಸರ್ಕಾರಿ ನೌಕರರಿಗೆ ಸಮಾಜವನ್ನು ಕಟ್ಟಲು ಅಪಾರ ಅವಕಾಶಗಳಿರುತ್ತವೆ. ತಮ್ಮ ಅನುಭವಗಳನ್ನು ಸಮಾಜಮುಖಿ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಬುಧವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ 27ನೇ ವಾರ್ಷಿಕ ಮಹಾಸಭೆ ಹಾಗೂ 80 ವರ್ಷ ದಾಟಿದ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಬುದ್ಧಿವಂತರು ಮತ್ತು ವಿದ್ಯಾವಂತರು ಮೌನ ವಹಿಸುತ್ತಿರುವುದರಿಂದ, ಲೋಪದೋಷಗಳು ಹೆಚ್ಚಾಗುತ್ತಿವೆ. ಯಾವುದೇ ಹಂಗಿಲ್ಲದ ನಿವೃತ್ತ ನೌಕರರು ಸಮಾಜದಲ್ಲಿ ಸವಾಲುಗಳು ಮತ್ತು ಸಮಸ್ಯೆಗಳು ಎದುರಾದಾಗ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಆಡಳಿತ ವ್ಯವಸ್ಥೆಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಈ ಮೂಲಕ ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ತರಲು ಸಾಧ್ಯ ಎಂದು ಹೇಳಿದರು.

ಶೇ. 1ರಷ್ಟು ಮಾತ್ರ ಸರ್ಕಾರಿ ಉದ್ಯೋಗ

ರಾಜ್ಯದ ಜನಸಂಖ್ಯೆಯಲ್ಲಿ ಗರಿಷ್ಠ ಶೇ, 1ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳನ್ನು ನೀಡಲು ಅವಕಾಶವಿರುತ್ತದೆ. ಅಂದರೆ ರಾಜ್ಯದ 6.5 ಕೋಟಿ ಜನಸಂಖ್ಯೆಗೆ ಸುಮಾರು 6.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಮಾತ್ರ ನೀಡಬಹುದು. ಆದರೆ ಪ್ರಸ್ತುತ ಬಜೆಟ್​ ಕೊರತೆಯಿಂದಾಗಿ ಶೇ. 1 ರಷ್ಟೂ ಸರ್ಕಾರಿ ನೌಕರರಿಲ್ಲ, ಕೇವಲ ಶೇ. 0.50 ರಿಂದ 0.60ರಷ್ಟು ಮಾತ್ರ ಕೆಲಸ ಸಿಗಲು ಸಾಧ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉಳಿದ ಶೇ. 99 ರಷ್ಟು ಜನರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕಾದ ಸಾಮಾಜಿಕ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದರು.

ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಹರಿಕೃಷ್ಣ ಶಿವತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಿರೂರು ಮಠದ ದಿವಾನ ಡಾ.ಉದಯ ಕುಮಾರ್​ ಸರಳತ್ತಾಯ, ಉಡುಪಿ ಜಿಲ್ಲಾ ಖಜಾನಾಧಿಕಾರಿ ಅಪ್ಪಾ ಸಾಹೇಬ್​ ಮೋದಿ, ಉಡುಪಿ ಜಿಲ್ಲಾ ಮಾರ್ಗದರ್ಶಿ ಕೆನರಾ ಬ್ಯಾಂಕ್​ ಮುಖ್ಯ ಪ್ರಬಂಧಕ ಜಿ.ಹರೀಶ್​, ನಿವೃತ್ತ ನೌಕರರ ಬೈಂದೂರು ತಾಲೂಕು ಅಧ್ಯಕ್ಷ ಐ.ನಾರಾಯಣ, ಕುಂದಾಪುರ ತಾಲೂಕು ಅಧ್ಯಕ್ಷ ವಸಂತ್​ ಹೆಗ್ಡೆ, ಕಾರ್ಕಳ ತಾಲೂಕು ಅಧ್ಯಕ್ಷ ಶೇಖರ ಶೆಟ್ಟಿ, ಗೌರವ ಸಲಹೆಗಾರ ಸುಂದರ ಪ್ರಭು, ಜತೆ ಕಾರ್ಯದರ್ಶಿ ನೀಡುವಜೆ ರಾಮ ಭಟ್​, ಸಂಘಟನಾ ಕಾರ್ಯದರ್ಶಿ ವೀಣಾ ರಾವ್​, ಪಾಂಡು ಶೆಟ್ಟಿ, ರತ್ನಾಕರ ಕಿಣಿ, ವಿಶ್ವನಾಥ್​, ವಾಸು ಆಚಾರ, ಸರಸ್ವತಿ, ಶಕುಂತಲಾ ಹೆಗ್ಡೆ, ರಘುರಾಮ್​ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶೇಖರ್​ ನಾಯಕ್​ ವರದಿ ವಾಚಿಸಿದರು. ಕೋಶಾಧಿಕಾರಿ ಚಂದ್ರಶೇಖರ್​ ಲೆಕ್ಕಪತ್ರ ಮಂಡಿಸಿದರು. ಕೆ.ಆನಂದ ಗಾಣಿಗ ಪ್ರಾರ್ಥಿಸಿದರು. ಗಾರ್ಗಿ ಶಬರಾಯ ವಂದೇ ಮಾತರಂ ಹಾಡಿದರು. ಸಂಘದ ಗೌರವಾಧ್ಯಕ್ಷ ಪಿ.ನಾರಾಯಣ ಭಟ್​ ಸ್ವಾಗತಿಸಿದರು. ಸುಬ್ರಹ್ಮಣ್ಯ ಶೇರಿಗಾರ್​ ಹಾಗೂ ಕೆ.ಮುರುಳೀಧರ ಆಚಾರ್​ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ.ಆನಂದ ಗಾಣಿಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net