

ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಕರಾವಳಿ ಹಾಗೂ ಮಲೆನಾಡು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಆಗುಂಬೆಯಲ್ಲಿ ರಸ್ತೆಯ ತಡೆಗೋಡೆ ಕುಸಿದು ಅಪಾಯ ಆಹ್ವಾನಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಶೀಘ್ರ ಕ್ರಮ ವಹಿಸದಿದ್ದಲ್ಲಿ, ಸಮಸ್ಯೆಗಳಿಗೆ ಕಾರಣವಾಗಲಿದೆ.
ಕೆಲ ತಿಂಗಳ ಹಿಂದೆ ಆಗುಂಬೆ ಸೂರ್ಯಾಸ್ತಮಾನ ವೀಕ್ಷಣೆ ಸ್ಥಳ ಸಮೀಪ ಮುಖ್ಯರಸ್ತೆಯ ತಡೆಗೋಡೆ ಕುಸಿತವಾಗಿದ್ದ ಸ್ಥಳದಲ್ಲಿಯೇ 2 ದಿನಗಳ ಹಿಂದೆ ಮತ್ತೊಮ್ಮೆ ಮಣ್ಣು ಕುಸಿತವಾಗಿದೆ. ಕೆಲ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಭಾರಿ ಗುಡ್ಡ ಕುಸಿತ ಸಂಭವಿಸಿ 3 ತಿಂಗಳು ಸಂಚಾರ ಬಂದ್ ಆಗಿತ್ತು. ಇದೀಗ ಅದೇ ಸ್ಥಳದಲ್ಲಿ ಮಣ್ಣು ಕುಸಿತವಾಗಿದ್ದು, ಮಳೆಯಾದರೆ ಮತ್ತಷ್ಟು ಕುಸಿತವಾಗುವ ಭೀತಿ ಎದುರಾಗಿದೆ.
ಆಗುಂಬೆ ಘಾಟಿ ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಸಂಚಾರದ ಪ್ರಮುಖ ಕೊಂಡಿ. ಘಾಟಿಯಲ್ಲಿ ಒಟ್ಟು 14 ಕಡಿದಾದ ತಿರುವುಗಳಿದ್ದು, ಅವುಗಳಲ್ಲಿ ಮೇಲ್ಭಾಗದ 7 ತಿರುವುಗಳು ಶಿವಮೊಗ್ಗ ಜಿಲ್ಲೆಗೂ ಹಾಗೂ ಕೆಳಗಿನ 7 ತಿರುವುಗಳು ಉಡುಪಿ ಜಿಲ್ಲೆಗೂ ಸೇರಿವೆ. ಪ್ರಸ್ತುತ 5, 7, 3, 4 ತಿರುವು ಹಾಗೂ ಆನೆಕಲ್ಲು ರಸ್ತೆ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸೂರ್ಯಾಸ್ತ ಸಮಯದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕರಿಸಬೇಕಿದೆ. ಕುಸಿದಿರುವ ರಸ್ತೆ ಅಂಚಿನ ಬಳಿ ನಿಂತು ಫೋಟೋ ತೆಗೆಯುವುದು ಅಥವಾ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು ಸುರಕ್ಷಿತ ಎಂಬುದು ಸ್ಥಳೀಯರ ಅಭಿಪ್ರಾಯ.
ಆಗುಂಬೆ ಘಾಟಿ ರಸ್ತೆ ದುರಸ್ತಿಗಾಗಿ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಘಾಟಿ ರಸ್ತೆ ದುಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬಿಡುಗಡೆಯಾಗಿರುವ ಈ ಅನುದಾನದಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಿದೆ. ರಸ್ತೆ ಕುಸಿತ, ಹೆಚ್ಚುತ್ತಿರುವ ಪ್ರವಾಸಿಗರ ವಾಹನ ದಟ್ಟಣೆ ಗಮನದಲ್ಲಿಟ್ಟುಕೊಂಡು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು.
ಜುಲೈನಲ್ಲಿ ಆಗುಂಬೆ ಘಾಟಿ ಪ್ರದೇಶಕ್ಕೆ ಭೇಟಿ ನೀಡಿದ ರಾಜ್ಯದ ಲೋಕೋಪಯೋಗಿ ಸಚಿವ ಜಾರಕಿಹೊಳಿ ರಸ್ತೆಯ ಅಪಾಯಕಾರಿ ತಿರುವುಗಳ ದುರಸ್ತಿಗೆ ವಿಶೇಷ ಗಮನ ನೀಡಲಾಗುವುದು ಎಂದು ತಿಳಿಸಿದ್ದರು.
ಸೂರ್ಯಾಸ್ತ ಸಮಯವಾಗುತ್ತಿದ್ದಂತೆ ಆಗುಂಬೆಯತ್ತ ಪ್ರವಾಸಿಗರ ವಾಹನಗಳು ಹೆಚ್ಚಾಗುತ್ತವೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಸೂರ್ಯಾಸ್ತ ವೀಕ್ಷಿಸುವವರು, ಫೋಟೋ ತೆಗೆಯುವವರು, ಎದುರು ಬದುರಾಗಿ ಸಾಗುವ ವಾಹನಗಳು ಇವೆಲ್ಲವೂ ಸೇರಿ ಘಾಟಿಯ ಕಿರಿದಾದ ರಸ್ತೆಯಲ್ಲಿ ಸಂಚಾರದ ಒತ್ತಡ ಸೃಷ್ಟಿಸುತ್ತಿವೆ. ವೀಕೆಂಡ್ ದಿನಗಳಲ್ಲಿ ಈ ಒತ್ತಡ ಇನ್ನಷ್ಟು ಹೆಚ್ಚಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದು ಸ್ಥಳೀಯರಿಗೆ ನಿತ್ಯದ ಸಮಸ್ಯೆಯಾಗಿದೆ. ವಾಹನ ಸವಾರರು ಅಪಾಯದ ಸ್ಥಳದಲ್ಲಿ ನಿಧಾನವಾಗಿ ಹಾಗೂ ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.