ದೃಷ್ಟಿ ಕಮಾಂಡ್​ ಆ್ಯಂಡ್​ ಕಂಟ್ರೋಲ್​ ಸೆಂಟರ್​ ಆರಂಭ

 Control Center
ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿರುವ ದೃಷ್ಟಿ ಕಮಾಂಡ್​ ಆ್ಯಂಡ್​ ಕಂಟ್ರೋಲ್​ ಸೆಂಟರ್​ಗೆ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್​ ಅರ್ಷದ್​ ಭೇಟಿ ನೀಡಿ ವ್ಯವಸ್ಥೆಯನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತಿಕ್​ ಬಾಯಲ್​, ಎಸ್ಪಿ ಹರಿರಾಂ ಶಂಕರ್​ ಉಪಸ್ಥಿತರಿದ್ದರು.
Published on: 

ಉಡುಪಿ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ಸಂಚಾರ ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್​ ಇಲಾಖೆ ಸಮಗ್ರ ಕಾರ್ಯಯೋಜನೆ ರೂಪಿಸಿದ್ದು, ಮುಂದಿನ ತಿಂಗಳು ನೂತನ ದೃಷ್ಟಿ ಇಂಟಿಗ್ರೇಟೆಡ್​ ಸಿಸಿಟಿವಿ ಆ್ಯಂಡ್​ ಕಮಾಂಡ್​ ಕಂಟ್ರೋಲ್​ ಸೆಂಟರ್​ ಆರಂಭಿಸಲು ಸಿದ್ಧತೆ ನಡೆಸಿದೆ.

ಜಿಲ್ಲಾ ಪೊಲೀಸ್​ ಇಲಾಖೆ ಮತ್ತು ಡಿ.ಪಿ.ಐ.ಎಫ್​.ಎಸ್​. ಸಲ್ಯೂಶನ್​ ಸಹಭಾಗಿತ್ವದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 200 ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದ್ದು, ಮುಂದಿನ ಹಂತದಲ್ಲಿ ಮತ್ತೆ 200 ಕ್ಯಾಮೆರಾಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. 24*7 ಕಾರ್ಯನಿರ್ವಹಿಸುವ ಈ ಕೇಂದ್ರದ ಮೂಲಕ ರಸ್ತೆ ಅಪಘಾತಗಳು, ಸಂಚಾರ ನಿಯಮ ಉಲ್ಲಂಘನೆ, ಕಾನೂನು ಸುವ್ಯವಸ್ಥೆ ಹಾಗೂ ಅಹಿತಕರ ಘಟನೆಗಳ ಮೇಲೆ ನಿರಂತರ ನಿಗಾ ಇಡಲಾಗುವುದು ಮತ್ತು ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ದಂಡದ ನೋಟಿಸ್​ಗಳನ್ನು ವ್ಯವಸ್ಥೆಯಿಂದ ಜನರೇಟ್​ ಮಾಡಲಾಗುತ್ತದೆ.

ಸ್ಪೀಡ್​ ರಾಡಾರ್​ ಅಳವಡಿಕೆ

ಸರ್ಕಾರಿ ಅನುದಾನಿತ ಯೋಜನೆಯಡಿ ಸುಮಾರು ರೂ. 60 ಲಕ್ಷ ಅಂದಾಜು ವೆಚ್ಚದಲ್ಲಿ ಕಾರ್ಕಳದ ದೂಪದಕಟ್ಟೆ, ಪಡುಬಿದ್ರಿಯ ಉಚ್ಚಿಲ, ಕಾಪುವಿನ ದಂಡತೀರ್ಥ, ಕೋಟದ ತೆಕ್ಕಟ್ಟೆ, ಗಂಗೊಳ್ಳಿಯ ತ್ರಾಸಿ ಮತ್ತು ಬೈಂದೂರಿನ ನಾಯಕನಕಟ್ಟೆಯಲ್ಲಿ ವಾಹನ ನಂಬರ್​ ಪ್ಲೇಟ್​ ಗುರುತಿಸುವ ಹಾಗೂ ವೇಗ ಪತ್ತೆಹಚ್ಚುವ ಸ್ಪೀಡ್​ ರಾಡಾರ್​ ಕ್ಯಾಮರಗಳನ್ನು ಅಳವಡಿಸಲಾಗಿದೆ.

32 ಹೊಸ ಕ್ಯಾಮೆರಾಗಳು

ಪ್ರಸ್ತುತ ಸುಮಾರು ರೂ. 1.45 ಕೋಟಿ ವೆಚ್ಚದಲ್ಲಿ ಹೆಜಮಾಡಿ, ನಿಟ್ಟೂರು, ಶಿರೂರು, ಪರ್ಕಳ, ಬಜಗೋಳಿ, ಸಾಣೂರು, ಸೋಮೇಶ್ವರ ಮತ್ತು ಹೊಸಂಗಡಿ ಸೇರಿದಂತೆ ಎಂಟು ಪ್ರಮುಖ ಸ್ಥಳಗಳಲ್ಲಿ ತಲಾ ನಾಲ್ಕರಂತೆ ಒಟ್ಟು 32 ಕ್ಯಾಮರಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಟ್ರಾಫಿಕ್​ ಸಿಗ್ನಲ್​ ಮತ್ತು ವಿಸ್ತರಣೆ

ರಾಷ್ಟ್ರೀಯ ಹೆದ್ದಾರಿ 66ರ ಬಲಾಯಿಪಾದೆ ಮತ್ತು ಅಂಬಾಗಿಲಿನಲ್ಲಿ ಹೊಸ ಟ್ರಾಫಿಕ್​ ಸಿಗ್ನಲ್​ಗಳನ್ನು ಅಳವಡಿಸಲಾಗಿದ್ದು, ಕಲ್ಸಂಕ ಮತ್ತು ಅಂಬಾಗಿಲಿನಲ್ಲಿ ಕ್ಯಾಮರಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಪಡುಬಿದ್ರೆ, ಕರಾವಳಿ ಜಂಕ್ಷನ್​, ಆಕಾಶವಾಣಿ ಬ್ರಹ್ಮಾವರ, ಸಾಲಿಗ್ರಾಮ ಹಾಗೂ ಉಡುಪಿ, ಮಲ್ಪೆ ಮತ್ತು ಮಣಿಪಾಲ ವ್ಯಾಪ್ತಿಯಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಲಾಗಿದೆ. ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಪ್ರಮುಖ ರಸ್ತೆಗಳಲ್ಲಿ ಸುಮಾರು 50 ಬ್ಯಾರಿಕೇಡ್​ಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ.

ಮರಣ ಪ್ರಮಾಣ ಇಳಿಕೆ

ಕಳೆದ ಎರಡು ವರ್ಷಗಳ ಅಪಘಾತದ ಅಂಕಿ&ಅಂಶಗಳನ್ನು ಗಮನಿಸಿದರೆ ಪೊಲೀಸ್​ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳಿಂದ ಅಪರಾಧ ಪ್ರಮಾಣ ಇಳಿಕೆಯಾಗುತ್ತಿದೆ. 2025ರಲ್ಲಿ ಒಟ್ಟು 1,108 ಅಪಘಾತ ಪ್ರಕರಣಗಳು ವರದಿಯಾಗಿದ್ದು, 266 ಮಂದಿ ಮೃತಪಟ್ಟು 1,259 ಮಂದಿ ಗಾಯಗೊಂಡಿದ್ದಾರೆ. 2026ರಲ್ಲಿ ಒಟ್ಟು 917 ಅಪಘಾತ ಪ್ರಕರಣಗಳು ದಾಖಲಾಗಿದ್ದು, 224 ಮಂದಿ ಸಾವನ್ನಪ್ಪಿ 1,057 ಮಂದಿ ಗಾಯಗೊಂಡಿದ್ದಾರೆ.

ದೃಷ್ಟಿ ಉತ್ತಮ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಣೆ ಮಾಡಲಾಗುವುದು. ಜಿಲ್ಲೆಯ ಪ್ರಮುಖ ಜಂಕ್ಷನ್​ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕ್ಯಾಮರಗಳನ್ನು ಅಳವಡಿಸಲಾಗುವುದು. ಇದರಿಂದ ಸಂಚಾರ ನಿಯಮ ಉಲ್ಲಂಘನೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೂ ಇದು ಸಹಕಾರಿಯಾಗಲಿದೆ. ಜೊತೆಗೆ ಪ್ರತಿ ಗ್ರಾಪಂ ವತಿಯಿಂದ 5 ಕ್ಯಾಮರಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ.

ರಿಜ್ವಾನ್​ ಅರ್ಷದ್​, ಜಿಲ್ಲಾ ಉಸ್ತುವಾರಿ ಸಚಿವ