ಅಪರಾಧ ರಹಿತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಮಹತ್ವಪೂರ್ಣ ಪಾತ್ರ

Sports Meet
ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಗೌರವ ವಂದನೆ ಸ್ವೀಕರಿಸಿದರು. 
Published on: 

ಉಡುಪಿ: ನಾಗರಿಕರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಕಾನೂನು-ಸುವ್ಯವಸ್ಥೆ ಸದೃಢವಾಗಿರುವುದು ಬಹು ಮುಖ್ಯ. ಇಂತಹ ಸೌಹಾರ್ದಮಯ ಅಪರಾಧ ರಹಿತ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸರು ಬಹುಮುಖ್ಯ ಪಾತ್ರವಹಿಸುತ್ತಿದ್ದು, ತಮ್ಮ ಒತ್ತಡಪೂರ್ಣ ಜೀವನಶೈಲಿಯಿಂದ ಬಿಡುಗಡೆ ಹೊಂದಲು ಕ್ರೀಡಾಕೂಟಗಳು ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಅಭಿಪ್ರಾಯಪಟ್ಟರು.

ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

 ಸಮಾಜವು ಅಭಿವೃದ್ದಿ ಹೊಂದಬೇಕಾದರೆ ಅಪರಾಧ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸಮಾಜದಲ್ಲಿ ನ್ಯಾಯ, ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪ್ರಪ್ರಥಮ ಇಲಾಖೆ ಪೊಲೀಸರದ್ದಾಗಿದೆ.  ಆರೋಗ್ಯಕರ ಸ್ಪರ್ಧೆ ಮತ್ತು ಸಹೋದರತ್ವದ ಭಾವನೆಯಿಂದ ಸ್ಪರ್ಧಾಳುಗಳು ಆಟೋಟಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು.
 ಜಿಲ್ಲೆಯ ಪೊಲೀಸ್ ಇಲಾಖೆಯು ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ. ಅಪರಾಧ ಪತ್ತೆಗೆ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಿ ಇಡೀ ಜಿಲ್ಲೆಗೆ ಕಣ್ಗಾವಲು ವ್ವವಸ್ಥೆ ಅಳವಡಿಸಲು ಮುಂದಾಗಿದೆ. ಅಪರಾಧ ಪ್ರಕರಣಗಳಲ್ಲಿ ಇಳಿಕೆಯಾದಾಗ ಅಭಿವೃದ್ದಿ ಕಾರ್ಯಗಳಿಗೆ ವೇಗ ದೊರೆತು ಜಿಲ್ಲೆ ಪ್ರಗತಿ ಪಥದಲ್ಲಿ ಸಾಗುತ್ತದೆ ಎಂದರು.
ಎಪಿಸಿ ಜೀವನ್ ನಾಯ್ಕ ಕ್ರೀಡಾ ಜ್ಯೋತಿಯೊಂದಿಗೆ ವೇದಿಕೆಗೆ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಆರ್.ಎಸ್.ಐ ಚಂದ್ರ ಎಂ. ಪ್ರಮಾಣ ವಚನ ಬೋಧಿಸಿದರು.  ಇದೇ ಸಂದರ್ಭದಲ್ಲಿ  ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಪಟು ಶ್ರುತಿ ಪಿ. ಶೆಟ್ಟಿ ಇವರಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.  ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸ್ವಾಗತಿಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ವಂದಿಸಿ, ಎಪಿಸಿ ಯೋಗೀಶ್ ನಾಯ್ಕ ನಿರೂಪಿಸಿದರು.