

ಉಡುಪಿ: ಜಿಲ್ಲೆಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಬ್ಯಾಂಕ್ಗಳು ಆರ್ಥಿಕ ನೆರವು ಕಲ್ಪಿಸಬೇಕು. ಯೋಜನೆಯ ಹೆಚ್ಚು ಜನರು ಪ್ರಯೋಜನ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ತಿಳಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಯೋಜನೆಯಡಿ ವಿವಿಧ ಘಟಕಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ 15 ಲಕ್ಷ ರೂ. ಗಳ ಅನುದಾನ ನೀಡಲಾಗುತ್ತಿದ್ದು, ಶೇ. 50 ರಷ್ಟು ಸಹಾಯಧನ ಸೌಲಭ್ಯವಿದೆ. ಆಸಕ್ತರು ಮೊಬೈಲ್ ಮೂಲಕವೇ ಜಿಲ್ಲಾ ಸಂಪನ್ಮೂಲ ವ್ಯಕ್ತಿಗೆ ಅವಶ್ಯಕತೆ ದಾಖಲೆಗಳನ್ನು ಸಲ್ಲಿಸಿ, ಅವರ ಮಾರ್ಗದರ್ಶನದ ಅನುಸಾರ ಬ್ಯಾಂಕ್ಗಳಿಂದ ಆರ್ಥಿಕ ನೆರವು ಪಡೆಯಬಹುದಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಾಯೋಜಿತ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ, ನಿಗಧಿತ ಗುರಿ ಸಾಧನೆಗೆ ಮುಂದಾಗಬೇಕು. ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಸಾರ್ವಜನಿಕರ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ ಆದ್ಯತೆಯ ಮೇಲೆ ವಿಲೇವಾರಿಗೆ ಗಮನಹರಿಸಬೇಕು ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿವಿಜನಲ್ ಮ್ಯಾನೇಜರ್ ಅರ್ಚನಾ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ತೆಮಾಸಿಕದವರೆಗೆ 78,101.82 ಕೋಟಿ ರೂ. ವಹಿವಾಟು ನಡೆದಿದ್ದು, ಬ್ಯಾಂಕಿಂಗ್ ಠೇವಣಿ ಮತ್ತು ಸಾಲ ಅನುಪಾತವು ಶೇ.48.62 ರಷ್ಟಿದೆ. ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 18,532.26 ಕೋಟಿ ರೂ. ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದರು.
ಕೃಷಿ ವಲಯಕ್ಕೆ 2,644.45 ಕೋಟಿ ರೂ., ಎಂ.ಎಸ್.ಎಂ.ಇ ವಲಯಕ್ಕೆ 3,201.20 ಕೋಟಿ ರೂ., ಶಿಕ್ಷಣ ವಲಯದಲ್ಲಿ 142.58 ಕೋಟಿ ರೂ., ವಸತಿ ಕ್ಷೇತ್ರಗಳಿಗೆ 140.90 ಕೋಟಿ ರೂ., ಇತರೆ ಕ್ಷೇತ್ರಗಳಿಗೆ 307.89 ಕೋಟಿ ರೂ. ವಿತರಿಸಲಾಗಿದೆ ಎಂದರು.
ಸಭೆಯಲ್ಲಿ ನಬಾರ್ಡ್ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಜೆ.ಜೆ.ಎಂ ವಿಶ್ವನಾಥ ಶೆಟ್ಟಿ, ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.