ಅಡಿಕೆ, ಕಾಳುಮೆಣಸು ವಿಮಾ ಪರಿಹಾರದಲ್ಲಿ ತಾರತಮ್ಯ

ಉಡುಪಿಯಲ್ಲಿ  ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಸಮಿತಿಯ ಸಭೆಯಲ್ಲಿ ಸೀತಾರಾಮ ಗಾಣಿಗ ಮಾತನಾಡಿದರು. ಪುಟ್ಟಸ್ವಾಮಿ, ರಮೇಶ ರಾಜು, ಸತ್ಯನಾರಾಯಣ ಉಡುಪ ಉಪಸ್ಥಿತರಿದ್ದರು.
ಉಡುಪಿಯಲ್ಲಿ ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಸಮಿತಿಯ ಸಭೆಯಲ್ಲಿ ಸೀತಾರಾಮ ಗಾಣಿಗ ಮಾತನಾಡಿದರು. ಪುಟ್ಟಸ್ವಾಮಿ, ರಮೇಶ ರಾಜು, ಸತ್ಯನಾರಾಯಣ ಉಡುಪ ಉಪಸ್ಥಿತರಿದ್ದರು.
Published on: 

* ಜಿಲ್ಲಾ ಹಿರಿಯ ಪದಾಧಿಕಾರಿ ಸೀತಾರಾಮ ಗಾಣಿಗ ಆರೋಪ

* ತನಿಖೆಗೆ ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಸಭೆಯಲ್ಲಿ ಆಗ್ರಹ

ಉಡುಪಿ: ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಘೋಷಣೆಯಾಗಿರುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರದಲ್ಲಿ ಗ್ರಾಮವಾರು ತಾರತಮ್ಯ ನಡೆದಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಪರಿಹಾರದ ಮಾನದಂಡ ನಿಗದಿಯಾಗಿದ್ದರೂ ಮಾನವ ಹಸ್ತಕ್ಷೇಪ ಸ್ಪಷ್ಟವಾಗಿ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಪಾರದರ್ಶಕ ತನಿಖೆಗೆ ನಡೆಸಬೇಕು ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಹಿರಿಯ ಪದಾಧಿಕಾರಿ ಸೀತಾರಾಮ ಗಾಣಿಗ ಆಗ್ರಹಿಸಿದರು.

ಉಡುಪಿಯಲ್ಲಿ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಮಾತನಾಡಿ, ಈ ಬಗ್ಗೆ ರೈತರ ದೂರುಗಳು ಬಂದಿದೆ. ಈ ವಿಚಾರದಲ್ಲಿ ಚರ್ಚಿಸಿ, ಗ್ರಾಮವಾರು ಪರಿಹಾರದ ಮಾಹಿತಿ ಪಡೆದು, ಆನಂತರ ಸತ್ಯಾಸತ್ಯತೆ ಪರಿಶೀಲಿಸಿ, ಪಾರದರ್ಶಕ ತನಿಖೆ ನಡೆಸಬೇಕು ಎಂದರು.

ಬೆಂಗಳೂರಿನಲ್ಲಿ ನ.30ರಂದು ಧರಣಿ

ಮಳೆ ಸುರಿದ ಪ್ರಮಾಣದಲ್ಲೂ ವ್ಯತ್ಯಾಸ ಇಲ್ಲದಿದ್ದರೂ ಜಿಲ್ಲೆಯಲ್ಲಿ ಕೆಲವು ಗ್ರಾಮಗಳಿಗೆ ಭಾರಿ ಕಡಿಮೆ ಪರಿಹಾರ ಘೋಷಣೆಯಾಗಿದ್ದು, ಅಕ್ಕ-ಪಕ್ಕದ ಗ್ರಾಮಗಳಿಗೆ ಹೋಲಿಸಿದರೆ ತಾರತಮ್ಯ ಕಂಡುಬರುತ್ತಿದೆ. ರೈತರ ಪ್ರಮುಖ 10 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಧರಣಿ ಸತ್ಯಾಗ್ರಹ ಆಯೋಜಿಸಿದ್ದು ಉಡುಪಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು ಎಂದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂತ್ಯ ಅಧ್ಯಕ್ಷ ರಮೇಶ ರಾಜು ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಧರಣಿಗೆ ರಾಜ್ಯಾದಾದ್ಯಂತ 20 ಸಾವಿರಕ್ಕೂ ಹೆಚ್ಚು ರೈತರು ಸೇರಲಿದ್ದಾರೆ ಎಂದರು. ರೈತರ ನ್ಯಾಯಯುತ ಬೇಡಿಕೆಯ ಈಡೇರಿಕೆಗೆ ಸಂಘಟನೆ ಕಟಿಬದ್ಧವಾಗಿದೆ ಎಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದರು.

ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸಂತೋಷಕುಮಾರ ಶೆಟ್ಟಿ, ಶೈಲೇಶ ಮರಾಠೆ, ಆಸ್ತಿಕ ಶಾಸ್ತ್ರಿ, ಅನಂತ ಪದ್ಮನಾಭ ಉಡುಪ, ನಾರಾಯಣ ಶೆಟ್ಟಿ, ನಾಗರಾಜ ಉಡುಪ, ಭೋಜರಾಜ ಶೆಟ್ಟಿ, ಭಾಸ್ಕರ ಶೆಟ್ಟಿ ಹಾಗೂ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.