

ಉಡುಪಿ: ಪ್ರಾಯ ಆಗಿದೆಯೆಂದು ಎಣಿಸುತ್ತ ವರ್ಷ ಕಳೆಯಬಾರದು. ವಯಸ್ಸಾಯಿತೆಂದು ಯಾರಲ್ಲೂ ಹೇಳಬಾರದು. ಅದು ಮನಸ್ಸಿನ ಖಿನ್ನತೆಗೆ ಮೂಲ ದಾರಿಯಾಗುತ್ತದೆ. ದೇಹಕ್ಕೆ ವಯಸ್ಸಾದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ನಮ್ಮ ದೇಗಲದಲ್ಲಿ ನವದುರ್ಗಾ ಲೇಖನ ಮತ್ತೆ ಆರಂಭಗೊಂಡಿದ್ದು, ಹಿರಿಯರೆಲ್ಲರೂ ತಮ್ಮ ಉತ್ತಮ ಆರೋಗ್ಯಕ್ಕೆ ಸಂಕಲ್ಪಿಸಿ ಲೇಖನ ಅಭಿಯಾನದಲ್ಲಿ ತೊಡಗಿಕೊಳ್ಳಬಹುದು ಎಂದು ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ್ ಶೆಟ್ಟಿ ತಿಳಿಸಿದರು.
ಉಡುಪಿಯ ಪುರಭವನದಲ್ಲಿ ಉಡುಪಿ ಹಿರಿಯ ನಾಗರಿಕರ ಸಂಸ್ಥೆ (ರಿ.) ವತಿಯಿಂದ ಶನಿವಾರ (ಸೆ.26) ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ 2025-26ನೇ ಸಾಲಿನಲ್ಲಿ 80 ವರ್ಷ ಪೂರೈಸಿದ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಪು ತಾಲೂಕಿನಲ್ಲಿಯೂ ಹಿರಿಯ ನಾಗರಿಕರ ಸಂಸ್ಥೆ ಆರಂಭಕ್ಕೆ ಯತ್ನ, ಸಂಘಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಚಿಂತೆಯೇ ಮುಪ್ಪು
ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜ್ನ ಪ್ರಾಂಶುಪಾಲೆ ಡಾ.ನಿಕೇತನಾ ಮಾತನಾಡಿ, ಸಮಾಜಕ್ಕೆ ಹಿರಿಯರ ಆಶೀರ್ವಾದ, ಮಾರ್ಗದರ್ಶನದ ಅಗತ್ಯತೆ ಇದೆ. ಹಿರಿಯರನ್ನು ಗೌರವಿಸಿವುದು ನಮ್ಮ ಸಂಪ್ರದಾಯ. ಕೆಲಸದಿಂದ ನಿವೃತ್ತರಾದೆವೆಂದು ಚಿಂತಿಸಬಾರದು. ಚಿಂತೆಯೇ ಮುಪ್ಪು. ಕಾಲ ಸರಿದಂತೆ ಸಹಜವಾಗಿ ಬದುಕುವುದನ್ನು ಕಲಿಯಬೇಕು. ಹಠ, ದ್ವೇಷ, ಮತ್ಸರ ತೊರೆದು ಮಕ್ಕಳು, ಮೊಮ್ಮಕ್ಕಳನ್ನು ಪ್ರೀತಿಸಿದರೆ ವೃದ್ಧಾಶ್ರಮ ಸೇರುವ ತಾಪತ್ರಯವಿಲ್ಲ ಎಂದು ಕಿವಿಮಾತು ಹೇಳಿದರು.
ಉಡುಪಿ ಜಿಲ್ಲಾ ಹಿರಿಯ ನಾಗರಿಕ ಒಕ್ಕೂಟದ ಗೌರವಾಧ್ಯಕ್ಷ ಕೆ.ಸದಾನಂದ ಹೆಗ್ಡೆ, ಸಂಸ್ಥೆಯ ಕಾರ್ಯದರ್ಶಿ ನಂದಕುಮಾರ್ ಉಪಸ್ಥಿತರಿದ್ದರು.
ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಕೆ.ಮುರಳೀಧರ್ ಸ್ವಾಗತಿಸಿದರು. ವಿಶ್ವನಾಥ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಜಯಾ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಎಸ್. ಹರಿದಾಸ ನಾಯಕ್ ವಂದಿಸಿದರು.
80 ವರ್ಷ ಪೂರೈಸಿದ 20 ಸದಸ್ಯರನ್ನು ಸನ್ಮಾನಿಸಲಾಯಿತು. ಮಾರುತಿ ಪ್ರಭು, ಮಾಲತಿ ತಂತ್ರಿ, ರಾಜಶ್ರೀ, ಹರಿದಾಸ ನಾಯಕ್ ಸನ್ಮಾನಿತರನ್ನು ಪರಿಚಯಿಸಿದರು.