

ಕಾರ್ಕಳ: ದುರ್ಗಾ ಗ್ರಾಮದ ತೆಳ್ಳಾರು ಹೊಳೆಯಲ್ಲಿ ಅಂದಾಜು 60 ವರ್ಷ ಪ್ರಾಯದ ಅಪರಿಚಿತರೊಬ್ಬರ ಮೃತದೇಹ ಶನಿವಾರ ಪತ್ತೆಯಾಗಿದೆ. ದುರ್ಗಾ ಗ್ರಾಮದ ತೆಳ್ಳಾರು ಪಲಾಯಿ ಬಾಕ್ಯಾರು ಓಡದ ಕರಿಯ ಎಂಬಲ್ಲಿ ಹರಿಯುವ ದುರ್ಗಾ ತೆಳ್ಳಾರು ಹೊಳೆಯಲ್ಲಿ ಪಿತ್ರ ಪಕ್ಷದ ಪಿಂಡ ಪ್ರದಾನ ಮಾಡಲು ಬಂದಿದ್ದ ಸಾರ್ವಜನಿಕರು, ಹೊಳೆಯಲ್ಲಿ ಮೃತದೇಹವಿರುವ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳೀಯರಾದ ವಿಜಯ ಸಪಲಿಗ ಹಾಗೂ ಊರಿನವರು ಪರಿಶೀಲಿಸಿದಾಗ, ಶವವು ಹೊಳೆಯ ಪೊದೆಯ ಕೋಲಿಗೆ ಸಿಕ್ಕಿರುವುದು ಬೆಳಕಿಗೆ ಬಂದಿದೆ. ಮೃತಪಟ್ಟು ಒಂದು ವಾರವಾದಂತಿದ್ದು, ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಬೇರೆ ಯಾವುದಾದರೂ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ವಿಜಯ ಸಪಲಿಗ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ತಲ್ಲೂರು ಗ್ರಾಮದ ತಲ್ಲೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ರಸ್ತೆಯ ಎಡಬದಿಗೆ ಬಂದು ತಲ್ಲೂರಿನಿಂದ ಹೆಮ್ಮಾಡಿ ಕಡೆಗೆ ಹೋಗಲು ರಸ್ತೆ ಅಂಚಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ವಿಜಯಪುರ ಜಿಲ್ಲೆಯ ಮುತ್ತು ಬಿರಾದಾರ ಮತ್ತು ಸಹಸವಾರ ಪವನ್ ಕುಮಾರ್ ಯಾದವ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.