ಹಿಂದೂ ರಾಷ್ಟ್ರದ ಶಕ್ತಿಯ ಪ್ರತೀಕ ಗಣೇಶೋತ್ಸವ

ಉಡುಪಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಕುಣಿತ ಭಜನೆ ಹಾಗೂ ಧಾರ್ಮಿಕ ಸಭೆಯನ್ನು ಸಗ್ರಿ ಗೋಪಾಲಕೃಷ್ಣ ಸಾಮಗ ಉದ್ಘಾಟಿಸಿದರು. ಸು.ರಾಮಣ್ಣ, ಯಶ್​ಪಾಲ್​ ಸುವರ್ಣ, ಪ.ವಸಂತ್​ ಭಟ್​,  ಕೆ.ರಮಾನಂದ್​ ಪ್ರಭು, ಕೆ.ಉದಯಕುಮಾರ್​ ಶೆಟ್ಟಿ, ಮುರಳಿಕೃಷ್ಣ ಉಪಾಧ್ಯ ಇತರರಿದ್ದರು.
ಉಡುಪಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಕುಣಿತ ಭಜನೆ ಹಾಗೂ ಧಾರ್ಮಿಕ ಸಭೆಯನ್ನು ಸಗ್ರಿ ಗೋಪಾಲಕೃಷ್ಣ ಸಾಮಗ ಉದ್ಘಾಟಿಸಿದರು. ಸು.ರಾಮಣ್ಣ, ಯಶ್​ಪಾಲ್​ ಸುವರ್ಣ, ಪ.ವಸಂತ್​ ಭಟ್​, ಕೆ.ರಮಾನಂದ್​ ಪ್ರಭು, ಕೆ.ಉದಯಕುಮಾರ್​ ಶೆಟ್ಟಿ, ಮುರಳಿಕೃಷ್ಣ ಉಪಾಧ್ಯ ಇತರರಿದ್ದರು.
Published on

ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ ಅಭಿಪ್ರಾಯ

* ಕಡಿಯಾಳಿಯಲ್ಲಿ ಕುಣಿತ ಭಜನಾ ಸ್ಪರ್ಧೆ ಉದ್ಘಾಟನೆ

ಉಡುಪಿ: ನಾವಿರುವ ಪ್ರಕೃತಿಯೇ ದೇವರಾಗಿದೆ. ದೇವಿ ಪಾರ್ವತಿಯ ಮೂಲಕ ಪ್ರಕೃತಿಯಲ್ಲಿ ಜನಿಸಿದ ಸಕಲ ವಿಘ್ನ ನಿವಾರಕನಾದ ಗಣೇಶನನ್ನು ಪೂಜಿಸುವುದು ಪ್ರಕೃತಿಯ ಆರಾಧನೆಯೇ ಆಗಿದೆ. ಎಲ್ಲ ಸಂಕಷ್ಟಗಳ ನಿವಾರಣೆ, ಸಕಲ ಇಷ್ಟಾರ್ಥ ಸಿದ್ಧಿದಾತನ ಉತ್ಸವದಿಂದ ಭಾರತ ಇನ್ನಷ್ಟು ಹಿಂದೂ ರಾಷ್ಟ್ರವಾಗಿ ಬೆಳಗಲಿ. ಗಣೇಶೋತ್ಸವ ಆಚರಣೆಯಿಂದ ಪರಿಸರಕ್ಕೆ ಹೆಚ್ಚು ಶಕ್ತಿ ಲಭಿಸಲಿ ಎಂದು ವಾಸುಕೀ ಸುಬ್ರಹ್ಮಣ್ಯ ದೇವಾಲಯದ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ ಹೇಳಿದರು.
ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇಗುಲದ ಹೊರಾಂಗಣದಲ್ಲಿ ಗುಜ್ಜಾಡಿ ನರಸಿಂಹ್​ ನಾಯಕ್​ ವೇದಿಕೆಯಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ವಜ್ರ ಮಹೋತ್ಸವದ ನಿಮಿತ್ತ ಗುರುವಾರ (ಸೆ.17) ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. 

ಭಗವಂತನೆಂದರೆ ಮೂಲನಂಬಿಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮಾತನಾಡಿ, ದೇವರ ನಂಬಿಕೆಯಿದ್ದರೆ ಎಂತಹುದೇ ವಿಪತ್ತಿನಿಂದ ಪಾರಾಗಬಹುದು. ಪುನರ್ಜನ್ಮ ಲಭಿಸಿ ಮತ್ತೆ ಪುನಶ್ಚೇತನಗೊಳ್ಳಲು ನಂಬಿಕೆಯೆಂಬ ಶಕ್ತಿಯಿಂದ ಸಾಧ್ಯವಿದೆ. ಭಗವಂತ ಇದ್ದಾನೆ ಎನ್ನುವುದೇ ಭಾರತದ ಮೂಲನಂಬಿಕೆಯಾಗಿದೆ. ಭಾರತವು ದೇವಭೂಮಿಯೇ ಹೊರತು ಭವದ ಭೂಮಿಯಲ್ಲ. ಆತ ಸರ್ವಾಂತರ್ಯಾಮಿ. ಆತನಿಲ್ಲದ ಜಾಗ-ಜೀವಿಯಿಲ್ಲ. ಸಸ್ಯ, ಪ್ರಾಣಿ-ಪಕ್ಷಗಳಲ್ಲೂ ಆತನಿದ್ದಾನೆ. ನಾವೆಲ್ಲರೂ ಸಹ ದೈವಾಂಶ ಸ್ವರೂಪಿಗಳು. ಸತ್ಯಯುಗ, ತ್ರೇತಾಯುಗ, ದ್ವಾಪರ ಹಾಗೂ ಕಲಿಯುಗದಲ್ಲೂ ಸಹ ಭಗವಂತನ ಪವಾಡ ನಡೆದಿದೆ. ತನ್ನ ನಂಬಿದವರನ್ನೂ ಎಂದಿಗೂ ಆತ ಕೈಬಿಡನು ಎಂದರು.
ಗಣೇಶೋತ್ಸವದ ವಜ್ರ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೆ.ರಮಾನಂದ್​ ಪ್ರಭು, ಕಿದಿಯೂರು ಫ್ಯಾಮಿಲಿ ಟ್ರಸ್ಟ್​ನ ಪ್ರವರ್ತಕ ಕೆ.ಉದಯಕುಮಾರ್​ ಶೆಟ್ಟಿ, ಮುರಳಿಕೃಷ್ಣ ಉಪಾಧ್ಯ, ಕುಣಿತ ಭಜನಾ ತರಬೇತುದಾರ ಅರುಣ್​ ಕುಂದರ್​, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ. ವಸಂತ್​ ಭಟ್​, ಭಜನಾ ಸಂಯೋಜಕ ರಮೇಶ್​ ಕಲ್ಮಾಡಿ ಉಪಸ್ಥಿತರಿದ್ದರು.
ಖ್ಯಾತಿ ಭಟ್​ ಪ್ರಾರ್ಥಿಸಿದರು. ವಜ್ರ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್​ ಅಂಚನ್​ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಮತ್ತು ಸರಿತಾ ಕಾರ್ಯಕ್ರಮ ನಿರೂಪಿಸಿದರು. ಎಂ.ವಲ್ಲಭ ಭಟ್​ ವಂದಿಸಿದರು.

ವಿದ್ಯಾರ್ಥಿಯಿಂದ 'ಥ್ಯಾಂಕ್ಯೂ ಗಣೇಶ' ಲೆಟರ್​

ಪ್ರತಿದಿನ ರಾತ್ರಿ 8:15ಕ್ಕೆ ಗಣಪತಿಗೆ ಮಹಾಮಂಗಳರಾತಿಯ ಸಂದರ್ಭದಲ್ಲಿ ಗಣೇಶನ ಭಜನೆ, ಪ್ರತಿದಿನ ಸಂಜೆ 4:30ರಿಂದ ರಾತ್ರಿ 9ರ ವರೆಗೆ ಕ್ಯಾಟರಿಂಗ್​ ಮಾಲೀಕರ ಸಹಕಾರದಲ್ಲಿ ಭಕ್ತರಿಗೆ ಉಪಹಾರ ವ್ಯವಸ್ಥೆ ನಡೆದಿದೆ. ಸೆ.19ರಂದು 8 ಸಾವಿರ ಜನರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ವರೆಗೆ ಭಕ್ತರಿಂದ ಹರಕೆ ರೂಪದಲ್ಲಿ 1.7 ಕೆಜಿ ಬೆಳ್ಳಿ ಸಮರ್ಪಣೆಯಾಗಿದೆ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯೋರ್ವ ಪರೀಕ್ಷೆಯಲ್ಲಿ ಶೇ.99 ಫಲಿತಾಂಶ ಬರುವಂತೆ ಗಣೇಶನಿಗೆ ಪ್ರಾರ್ಥನೆ ಮಾಡಿಕೊಂಡಿದ್ದ. ಆತ ಆ ಫಲಿತಾಂಶ ಸಾಧಿಸಿದ ಹಿನ್ನೆಲೆಯಲ್ಲಿ ತನ್ನ ಮನದಿಂಗಿತ ತಿಳಿಸಿ 'ಥ್ಯಾಂಕ್ಯೂ ಗಣೇಶ' ಎಂಬ ಪತ್ರ ಬರೆದು ಕಾಣಿಕೆ ಡಬ್ಬಿಯಲ್ಲಿ ಹಾಕಿರುವುದು ಗಣೇಶನ ಕುರಿತಾಗಿ ಇರುವ ನಂಬಿಕೆಗೆ ಪ್ರತೀಕವಾಗಿದೆ ಎಂದು ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ತಿಳಿಸಿದರು.
"

ದೇವರಿಲ್ಲ ಅದೆಲ್ಲ ಮೂಢನಂಬಿಕೆ, ನಾನು ದನದ ಮಾಂಸ ತಿನ್ನುತ್ತೇನೆ ಅಂದಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರು ಇತ್ತೀಚೆಗೆ ಅವರ ಮನೆಯ ಗ್ರಹಪ್ರವೇಶದ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ-ವಿಧಾನದಂತೆ ಪೂಜೆ ಮಾಡಿಸಿದರು. ಗೋವನ್ನು ಮನೆಯೊಳಗೆ ಬಿಟ್ಟು ಪೂಜಿಸಿದರು. ದೇವರ ಶಕ್ತಿ, ನಂಬಿಕೆ ಎಂದಿಗೂ ಯಾರನ್ನೂ ವಂಚಿಸದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net