

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕೆಲವು ಕಡೆಗಳಲ್ಲಿ ಎರಡು ತಿಂಗಳಿಂದ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡುಬಂದಿದ್ದು, ಹರಡುವ ಆತಂಕ ಎದುರಾಗಿದೆ. ಚರ್ಮಗಂಟು ರೋಗ ಅಂಟು ವೈರಸ್ನಿಂದ ಹರಡುವುದರಿಂದ ಒಂದು ಕೊಟ್ಟಿಗೆಯ ಜಾನುವಾರುಗಳಿಂದ ಮತ್ತೊಂದು ಕೊಟ್ಟಿಗೆಯ ಜಾನುವಾರುಗಳಿಗೂ ಸೋಂಕು ಹರಡುವ ಭೀತಿಯಿದೆ. ಇದರಿಂದ ವಿವಿಧೆಡೆಗೆ ರೋಗದ ವ್ಯಾಪ್ತಿ ಹೆಚ್ಚಾಗಬಹುದು ಎಂಬ ಆತಂಕವಿದೆ.
ಈಗ ದನಗಳಲ್ಲಿ ಈ ರೋಗ ಕಂಡುಬಂದಿಲ್ಲ. ಆದರೆ ಹೊಸದಾಗಿ ಹುಟ್ಟಿರುವ ಕರುಗಳಲ್ಲಿ ಈ ರೋಗ ಪತ್ತೆಯಾಗಿದೆ. ಚರ್ಮಗಂಟು ರೋಗ ನಿಯಂತ್ರಕ ಲಸಿಕೆ ಹಾಕದಿರುವುದರಿಂದ ರೋಗ ಕಂಡುಬರುತ್ತಿದೆ. ಆದರೆ ಮೃತಪಡುವ ಪ್ರಕರಣ ಈಗ ಕಡಿಮೆಯಿದ್ದು, ಸಾವಿನ ಪ್ರಮಾಣ ಶೇ.1ರಷ್ಟಿದೆ. ರೋಗ ಪತ್ತೆಯಾದ ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಕೊಡಿಸುವ ಮೂಲಕ ರೋಗ ಹರಡದಂತೆ ತಡೆಯಬಹುದು ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಆರಂಭದಲ್ಲಿ ದನಗಳ ಮೈಯಲ್ಲಿ ಒಂದೆರಡು ಕಡೆ ಗಂಟು ರೂಪದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಗಂಟುಗಳು ಒಡೆದು ಕೀವು ಸೋರುತ್ತದೆ. ಇದು ನೊಣಗಳ ಮೂಲಕ ಹರಡುವುದರಿಂದ ಅಕ್ಕಪಕ್ಕದಲ್ಲಿರುವ ಗೋವುಗಳಿಗೆ ಹರಡುವ ಸಾಧ್ಯತೆಯಿದೆ. ಈ ಚರ್ಮಗಂಟಿನಿಂದ ಹಸು ಮತ್ತು ಕರುಗಳಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ವಿಪರೀತ ಜ್ವರಕ್ಕೆ ಕೆಲ ಜಾನುವಾರುಗಳು ನಿತ್ರಾಣಗೊಳ್ಳುತ್ತಿವೆ. ಚರ್ಮಗಂಟು ರೋಗವನ್ನು ಲಂಪಿಸ್ಕಿನ್ ಎಂಬ ಸೊಳ್ಳೆಗಳು ಹೆಚ್ಚು ಹರಡುತ್ತಿವೆ. ಕಳೆದ 40-50 ವರ್ಷಗಳಿಂದ ಭಾರತದಲ್ಲಿ ಈ ರೋಗ ಕಂಡು ಬಂದಿರಲಿಲ್ಲ. ಆದರೆ 4 ವರ್ಷಗಳ ಹಿಂದೆ ದೇಶದಲ್ಲೂ ಕಾಣಿಸಿಕೊಂಡಿದ್ದು, ಈಗ ಸರ್ಕಾರ ವರ್ಷಕ್ಕೆರಡು ಬಾರಿ ಪಶು ಆಸ್ಪತ್ರೆ ಮೂಲಕ ಜಾನುವಾರುಗಳಿಗೆ ಲಸಿಕೆ ನೀಡಲು ಆರಂಭಿಸಿದೆ.
ಕುಂದಾಪುರ ತಾಲೂಕಿನಲ್ಲಿ ಒಟ್ಟಾರೆ 91,024 ಜಾನುವಾರುಗಳಿವೆ. ಈ ಪೈಕಿ ಕುಂದಾಪುರ ತಾಲೂಕಿನಲ್ಲಿ 54,871 ದನಗಳಿದ್ದರೆ, ಬೈಂದೂರು ತಾಲೂಕಿನಲ್ಲಿ 36,153 ಜಾನುವಾರುಗಳಿವೆ. ಅಕ್ಟೋಬರ್ವರೆಗೆ ಈ ಪೈಕಿ ಬಹುತೇಕ ಎಲ್ಲ ಜಾನುವಾರುಗಳಿಗೆ ಚರ್ಮ ಗಂಟು ರೋಗ ನಿರೋಧಕ ಲಸಿಕೆ ಹಾಕಿಸಲಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಕುಂದಾಪುರ, ವಂಡ್ಸೆ, ಶಂಕರನಾರಾಯಣ ಪಶು ಆಸ್ಪತ್ರೆ, ಗುಜ್ಜಾಡಿ, ಹೆಮ್ಮಾಡಿ, ಅಮಾಸೆಬೈಲು, ಬಿದ್ಕಲ್ಕಟ್ಟೆ, ಹುಣ್ಸೆಮಕ್ಕಿ, ಕೆದೂರು ಪಶು ಚಿಕಿತ್ಸಾಲಯ, ಬಸ್ರೂರು, ಕುಂಭಾಶಿ, ಕೊರ್ಗಿ, ಕಾಳಾವರ, ಕಂಡ್ಲೂರು, ಸಿದ್ದಾಪುರ, ಅಂಪಾರು, ಆಜ್ರಿ, ಗಂಗೊಳ್ಳಿಯಲ್ಲಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಿವೆ. ಇನ್ನು ಬೈಂದೂರು ತಾಲೂಕಿನಲ್ಲಿ ಬೈಂದೂರು, ಕಿರಿಮಂಜೇಶ್ವರ, ನಾಡ, ಹಳ್ಳಿಹೊಳೆ, ಜಡ್ಕಲ್, ಕೊಲ್ಲೂರು ಪಶು ಚಿಕಿತ್ಸಾಲಯಗಳಿದ್ದು, ಕಾಲ್ತೋಡಲ್ಲಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರವಿದೆ. ಈ ಎಲ್ಲ ಕಡೆಗಳಲ್ಲಿ ಲಸಿಕೆ ಲಭ್ಯವಿದೆ. ಪ್ರತೀ ಗ್ರಾ.ಪಂ.ಗೊಬ್ಬರು ಪಶು ಸಖಿಯರಿದ್ದು, ಅವರನ್ನು ಸಂಪರ್ಕಿಸಿ ಲಸಿಕೆ ಕೊಡಿಸಬಹುದು.