

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮಳೆಯಿರಲಿ, ಬಿಸಿಲಿರಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ 2 ಕಿ.ಮೀ. ದೂರದಿಂದ ಕೊಡಪಾನಗಳಲ್ಲಿ ಕುಡಿಯುವ ನೀರನ್ನು ಹೊತ್ತುಕೊಂಡು ಬರಬೇಕಾದ ದುಸ್ಥಿತಿ. ಇದು ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಮಡಿಬೆಣ್ಗೇರೆ ಪ್ರದೇಶದ ನಿವಾಸಿಗಳು ಕಳೆದ ಮೂರು ದಶಕಗಳಿಂದ ಪಡುತ್ತಿರುವ ದಿನನಿತ್ಯದ ಯಾತನೆ.
ಮಡಿಬೆಣ್ಗೇರೆ ಪ್ರದೇಶದಲ್ಲಿ 120ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಗ್ರಾಮಸ್ಥರನ್ನು ಕಂಗೆಡಿಸಿದೆ. ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ವಾಣವಾಗಿದೆ.
ಈ ಪ್ರದೇಶದ ಎಲ್ಲ ಬಾವಿಗಳಲ್ಲಿ ಉಪ್ಪು ಮಿಶ್ರಿತ ಚಗರು ನೀರು ಬರುತ್ತಿರುವುದರಿಂದ 2 ಕಿ.ಮೀ. ದೂರದಿಂದ ಕುಡಿಯುವ ನೀರನ್ನು ತರಬೇಕಾದ ದುಸ್ಥಿತಿ ಇದೆ. ಮಳೆಗಾಲದಲ್ಲಂತೂ ಈ ಭಾಗದ ಮಹಿಳೆಯರ ಪರಿಸ್ಥಿತಿ ಹೇಳತೀರದು. ನೀರಿನ ಸಮಸ್ಯೆಗೆ ಮುಕ್ತಿ ಕೊಡಿ ಎಂದು ಗ್ರಾಮಸ್ಥರು ಸ್ಥಳೀಯಾಡಳಿತಕ್ಕೆ ಮನವಿ ಮಾಡಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಜೆಜೆಎಂ ಪೈಪ್ಲೈನ್ ವಾಡಿ ಒಂದೂವರೆ ವರ್ಷ ಕಳೆದಿದ್ದು, ಹಾಕಿದ ಪೈಪ್ ಮತ್ತು ಟ್ಯಾಪ್ ತುಕ್ಕು ಹಿಡಿಯುತ್ತಿದೆ. ಪಂಚಾಯಿತಿಯಿಂದ ಅಳವಡಿಸಿದ ಪೈಪ್ನಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಇಲ್ಲಿನ ಜನ ಕುಡಿಯುವ ನೀರಿಗೆ ಕಿಲೋ ಮೀಟರ್ಗಟ್ಟಲೆ ಸಾಗಬೇಕು.
ಕಳೆದ ಮೂರು ದಶಕಗಳಿಂದ ಸಮಸ್ಯೆಗೆ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆಗುವವರೆಗೆ ಸ್ಥಳೀಯರು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ನೈಜ ಸ್ಥಿತಿ ಪರಿಶೀಲಿಸಬೇಕು. ಪ್ರತಿಯೊಂದು ಮನೆಗೂ ಸಮರ್ಪಕವಾಗಿ ಕುಡಿಯುವ ನೀರು ತಲುಪುವಂತೆ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.