

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಮಹಾಯೋಜನೆ (ಮಾಸ್ಟರ್ ಪ್ಲ್ಯಾನ್)ಯ ತಯಾರಿ ಕರಡು ಹಂತಕ್ಕೆ ಬಂದಿದೆ. 2008ರಲ್ಲಿಯೇ ಯೋಜನೆ ತಯಾರಿಸಲಾಗಿದ್ದು, 18 ವರ್ಷದಲ್ಲಿ ಉಡುಪಿ ನಗರ ಗಮನಾರ್ಹ ಬೆಳವಣಿಗೆ ಹೊಂದಿದೆ. ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದರಿಂದ ಮುಂದಿನ ವರ್ಷಗಳಲ್ಲಿ ಯೋಜನಾಬದ್ಧ ಬೆಳವಣಿಗೆಗೆ ಮತ್ತು ಇನ್ನಷ್ಟು ಅಭಿವೃದ್ಧಿಗೆ ಪೂರಕವಾಗಿ ಹಾಗೂ ಜನಸ್ನೇಹಿ ಸಮಗ್ರ ಮಾಸ್ಟರ್ ಪ್ಲ್ಯಾನ್ ರಚಿಸಬೇಕಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಸೂಚಿಸಿದರು.
ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಉಡುಪಿ ನಗರದ ಇಂಜಿನಿಯರ್, ಕ್ರೆಡೈ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶನಿವಾರ (ನ.21) ವಿಶೇಷ ಸಭೆ ನಡೆಸಿ ಮಾತನಾಡಿದರು.
ಅವಧಿ ವಿಸ್ತರಿಸಿ
ನಗರದ 35 ವಾರ್ಡ್ ಮತ್ತು 9 ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಕರಡು ಮಾಸ್ಟರ್ ಪ್ಲ್ಯಾನ್ ಪರಿಶೀಲಿಸಿ ಮಾಹಿತಿ ಪಡೆಯುವ ಅವಧಿಯನ್ನು 2 ತಿಂಗಳು ವಿಸ್ತರಿಸಬೇಕು. ಆಕ್ಷೇಪಗಳಿದ್ದಲ್ಲಿ ಅದನ್ನು ಸ್ವೀಕರಿಸಿ ಕೂಲಂಕಷವಾಗಿ ಪರಿಗಣಿಸಿ, ಅಂತಿಮಗೊಳಿಸಬೇಕು. ಈ ಬಗ್ಗೆ ತಜ್ಞರ ಸಲಹೆ ಪಡೆದು ಯೋಜನೆ ರೂಪಿಸಬೇಕು ಎಂದರು.
ಮಹಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕಾದ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ ಆರ್., ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭೆಯ ಇಂಜಿನಿಯರ್ಸ್, ಆರ್ಕಿಟೆಕ್ಟ್ ಸಂಸ್ಥೆ ಹಾಗೂ ಕ್ರೆಡೈ ಸಂಸ್ಥೆಯ ಪ್ರತಿನಿಧಿಗಳು ಇದ್ದರು.