ಉಡುಪಿ: ಬಡವರು ಮತ್ತು ಅಶಕ್ತರ ಕಣ್ಣೀರು ಒರೆಸುವ ಕಾಯಕದಲ್ಲಿ ಉಡುಪಿ ಧರ್ಮಪ್ರಾಂತ್ಯವು 15 ವರ್ಷದಿಂದ ನಿರಂತರ ಸೇವೆ ನೀಡುತ್ತಿದೆ. ಇದೀಗ ಈ ಕಾಯಕಕ್ಕೆ ಉದ್ಯಮಿ ಮೈಕಲ್ ಡಿಸೋಜಾ ಅವರು ಧರ್ಮಪ್ರಾಂತ್ಯದೊಂದಿಗೆ ಕೈಜೋಡಿಸಿದ್ದು, ಮತ್ತಷ್ಟು ಜನರಿಗೆ ಸೇವೆ ನೀಡಬಹುದಾಗಿದೆ. ಬಡ ಕುಟುಂಬಗಳ ನೋವಿಗೆ ಸ್ಪಂದಿಸಿ ಸಹಾಯ ಹಸ್ತ ಚಾಚುವ ಕೆಲಸ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿದೆ ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ತಿಳಿಸಿದರು.
ಉಡುಪಿಯ ತಮ್ಮ ನಿವಾಸದಲ್ಲಿ ಮೈಕಲ್ ಡಿಸೋಜಾ ಚಾರಿಟೀಸ್ ಮುಖ್ಯಸ್ಥ ಮೈಕಲ್ ಡಿಸೋಜಾ ಅವರೊಂದಿಗೆ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ನಡುವೆ ಬಡವರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಮುಂದಿನ ಐದು ವರ್ಷಕ್ಕೆ ಅಧಿಕೃತ ಒಪ್ಪಂದಕ್ಕೆ ಗುರುವಾರ (ನ.26) ಸಹಿ ಹಾಕಿ ಮಾತನಾಡಿದರು.
ಶಿಕ್ಷಣ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಎಂಡಿಎಸ್ ಚಾರಿಟೀಸ್ ಮೂಲಕ 13 ಕೋಟಿ ರೂಪಾಯಿಗೂ ಅಧಿಕ ಮೊತ್ತ ವ್ಯಯಿಸಲಾಗಿದೆ. ಸಮುದಾಯದ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸಿ, ಅವರಿಗೆ ಜೀವನದಲ್ಲಿ ಯಶಸ್ಸು ಕಾಣಲು ಈ ಸೇವಾ ಕಾರ್ಯ ಸಹಕಾರ ನೀಡಿದಂತಾಗುತ್ತದೆ ಎಂದರು.
ಎಂಡಿಎಸ್ ಚಾರಿಟೀಸ್ ಮುಖ್ಯಸ್ಥ ಮೈಕಲ್ ಡಿಸೋಜಾ ಮಾತನಾಡಿ, ಹೆತ್ತ ತಾಯಿ ಹಾಗೂ ಹುಟ್ಟಿದ ಊರು, ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ಮೂಲಕ ಸಮುದಾಯದ ಅಶಕ್ತರನ್ನು ಮೇಲೆತ್ತುವ ಕಾಯಕ ಮಾಡುತ್ತಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಮಾಧಾನ, ನೆಮ್ಮದಿ ತಂದಿದೆ ಎಂದರು.
ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಕಳೆದ 15 ವರ್ಷದಲ್ಲಿ ಕೈಗೊಂಡ ಎಡ್ಯುಕೇರ್ ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಅನುದಾನ, ಮೂರನೇ ಮಗುವಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಲಭಿಸಿದ ವಿವಿಧ ಅನುದಾನಗಳ ಸಚಿತ್ರ ಮಾಹಿತಿ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಫ್ರಾನ್ಸಿಸ್ ಎಫ್. ಲೂವಿಸ್, ಕುಲಪತಿ ಸ್ಟೀವನ್ ಡಿಸೋಜಾ, ಜುಡೀಶಿಯಲ್ ವಿಕಾರ್ ಡಾ. ರೋಶನ್ ಡಿಸೋಜಾ, ಸಂಪದ ನಿರ್ದೇಶಕ ರೆಜಿನಾಲ್ಡ್ ಪಿಂಟೊ, ಸೆನೆಟ್ ಸಭೆಯ ಸಹಕಾರ್ಯದರ್ಶಿ ವಿಲ್ಸನ್ ಡಿಸೋಜಾ, ಶಿರ್ವ ವಲಯ ಪ್ರಧಾನ ಗುರು ಚಾರ್ಲ್ಸ್ ಮಿನೇಜಸ್, ಎಂಡಿಎಸ್ ಚಾರಿಟೀಸ್ನ ಫ್ಲೇವಿ ಡಿಸೋಜಾ, ಲೈನಲ್ ಆರಾನ್ಹಾ, ಓಸ್ವಲ್ಡ್ ರೊಡ್ರಿಗಸ್, ಶುಭಾ ರೊಡ್ರಿಗಸ್ ಉಪಸ್ಥಿತರಿದ್ದರು.