

ಉಡುಪಿ: ಜಿಲ್ಲೆಯಲ್ಲಿ ತಳಮಟ್ಟದಿಂದ ಮತ್ತೆ ಪಕ್ಷ ಸಂಘಟಿಸುವಲ್ಲಿ ಎಲ್ಲರ ಸಹಕಾರ ಪಡೆದು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಸಂಘಟಿತರಾದರೆ ಗೆಲುವು ನಮ್ಮದಾಗಲಿದೆ. ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಭರವಸೆ ನೀಡಿದರು.
ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಮರುಕಳಿಸಲಿ ಗತವೈಭವ
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶನ್ ಹೆಗ್ಡೆ ಅವರ ಸಾರಥ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ನ ಗತವೈಭವ ಮರುಕಳಿಸಲಿ. ಕರಾವಳಿಯ ಕಡಲಿನಲ್ಲಿ ಕಾಂಗ್ರೆಸ್ನ ಬಾವುಟ ಬಾನೆತ್ತರಕ್ಕೆ ಹಾರಲಿ. ಪಕ್ಷ ಸಂಘಟನೆ ಹಾಗೂ ಬಲವರ್ಧನೆಯ ವಿಚಾರದಲ್ಲಿ ನಿಮ್ಮೊಂದಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದೆ ಎಂದರು.
ಮಹಿಳಾ ಕಾಂಗ್ರೆಸ್ನ ಹಿರಿಯ ನಾಯಕಿಯರಾದ ಸರಸು ಬಂಗೇರ, ಗೀತಾ ವಾಗ್ಳೆ, ಮೀನಾಕ್ಷಿ ಮಾಧವ ಬನ್ನಂಜೆ, ಅನಿತಾ ಡಿಸೋಜಾ, ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯೆಯರಾದ ಬಾನು ಭಾಸ್ಕರ್, ರೇಖಾ ಸುವರ್ಣ, ಅನಿತಾ ಬಾಬು ಪೂಜಾರಿ, ಮಮತಾ ಶೆಟ್ಟಿ, ಶಾಂತಲತಾ ಶೆಟ್ಟಿ, ಶಾಂತಾ ರೈ, ಸುಮಾ ಅಡ್ಯಂತಾಯ, ಸೂರ್ಯಕಾಂತಿ, ಪ್ರಮುಖರಾದ ಚಂದ್ರಿಕಾ ಶೆಟ್ಟಿ, ಐರಿನ್ ಅಂದ್ರಾದೆ, ಐಡಾ ಗಿಬ್ಬ ಡಿಸೋಜಾ, ಪ್ರಭಾ ಶೆಟ್ಟಿ, ರಮಾ ದೇವಿ, ನಾಗಮ್ಮ, ರೋಶಿನಿ ಶೆಟ್ಟಿ ಇತರರು ಉಪಸ್ಥಿತರಿದ್ದರು.
ಪುಷ್ಪಾ ಅಂಚನ್ ಸ್ವಾಗತಿಸಿದರು. ಸಂಧ್ಯಾ ತಿಲಕ್ರಾಜ್ ಹಿಂದಿನ ಸಭೆಯ ವರದಿ ವಾಚಿಸಿದರು. ಗೋಪಿ ನಾಯ್ಕ್ ವಂದಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶಯದಂತೆ ಯುವ ಸಮೂಹದ ಸದೃಢತೆಗಾಗಿ 16ರಿಂದ 35 ವಯೋಮಾನದ ಯುವಕ-ಯುವತಿಯರನ್ನು ಒಗ್ಗೂಡಿಸಲು 'ಭಾರತ್ ಜೋಡೋ' ಯುವ ಸಂಘವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಉಡುಪಿ ಜಿಲ್ಲಾದ್ಯಂತ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರು ಮತ್ತು ಮಹಿಳಾ ಪದಾಧಿಕಾರಿಗಳು ಶ್ರಮಿಸಬೇಕು.
> ಜ್ಯೋತಿ ಹೆಬ್ಬಾರ್. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ.