ಹೊಂಡಮಯ ರಸ್ತೆಗೆ ಕೊನೆಗೂ ಮುಕ್ತಿ

ಕೊಲ್ಲೂರು ಪೊಲೀಸ್ ಠಾಣೆ ತಿರುವಿನ ಬಳಿ ಕಾಂಕ್ರೀಟ್ ಕಾಮಗಾರಿ
ಕೊಲ್ಲೂರು ಮುಖ್ಯ ರಸ್ತೆಯ ಪೊಲೀಸ್ ಠಾಣಾ ತಿರುವಿನ ಮೂಕಾಂಬಿಕಾ ಸಭಾಭವನದವರೆಗೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವುದು.
Published on: 

ವಿಜಯವಾಣಿ ಸುದ್ದಿಜಾಲ ಬೈಂದೂರು

ಕೊಲ್ಲೂರು ಮುಖ್ಯ ರಸ್ತೆಯ ಪೊಲೀಸ್ ಠಾಣೆ ತಿರುವಿನ ಹೊಂಡಮಯ ರಸ್ತೆಗೆ ಕೊನೆಗೂ ಮುಕ್ತಿ ದೊರಕಿದೆ. ಹದಗೆಟ್ಟ ರಸ್ತೆಗೆ ಡಾಂಬರು ಹಾಕುವ ಬದಲು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.

ಮೂಕಾಂಬಿಕಾ ಸಭಾಭವನದವರೆಗೆ ರಸ್ತೆ ಕಾಮಗಾರಿ ಮುಂದುವರಿಯುತ್ತಿದೆ. ಈ ಹೊಂಡಮಯ ರಸ್ತೆಯಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು 8 ತಿಂಗಳ ಕಾಲ ಸಂಚರಿಸಲಾಗದಷ್ಟು ರಸ್ತೆ ಹದಗೆಟ್ಟಿತ್ತು. ಹೊಂಡಮಯ ಈ ರಸ್ತೆಯ ದುಸ್ಥಿತಿ ಬಗ್ಗೆ ‘ವಿಜಯವಾಣಿ’ ಅನೇಕ ಬಾರಿ ಸಚಿತ್ರ ವರದಿಯೊಂದಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು.

ಪ್ರಸ್ತುತ ಕಾಂಕ್ರೀಟ್ ಕಾಮಗಾರಿ ಏಕಮುಖ ವಾಹನ ಸಂಚಾರದ ವ್ಯಾಪ್ತಿಯವರೆಗೆ ಪೂರ್ಣಗೊಂಡಿದೆ. ಬಾಕಿ ಉಳಿದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಭರದಿಂದ ಸಾಗುತ್ತಿರುವ ಈ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾವಿನಕಾರು ತಿರುವಿನ ಬಳಿಯ ಸ್ವಾಗತ ಗೋಪುರದಿಂದ ದೇಗುಲದವರೆಗಿನ ಮುಖ್ಯರಸ್ತೆಯ ಸಂಪೂರ್ಣ ಡಾಂಬರು ಕಾಮಗಾರಿ ನಡೆದಿತ್ತು. ಆದರೆ ಕೇವಲ ಒಂದೆರಡು ತಿಂಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಮತ್ತೆ ಹೊಂಡಮಯವಾದ ಬಗ್ಗೆ ಸ್ಥಳೀಯರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಮುಖ್ಯ ರಸ್ತೆಯಲ್ಲೂ ಗುಂಡಿ

ಕೊಲ್ಲೂರು ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದು, ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಸಾವಿರಾರು ಯಾತ್ರಾರ್ಥಿಗಳು ಈ ಮಾರ್ಗವಾಗಿ ಕ್ಷೇತ್ರ ದರ್ಶನಕ್ಕೆ ಆಗಮಿಸುತ್ತಿದ್ದು, ದುರಸ್ತಿಯಾಗದ ರಸ್ತೆ ಮಾರ್ಗವು ವಾಹನ ಸವಾರರಿಗೆ ಕಿರಿಕಿರಿ ಉಂಟುವಾಡುತ್ತಿದೆ. ಇನ್ನೆರಡು ವಾರಗಳಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಳ್ಳುತ್ತಿದ್ದು, ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net