ಹೋಟೆಲ್​ಗಳಿಗೆ ಗ್ಯಾಸ್​ ಪೂರೈಕೆ ಆರಂಭ

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
Published on

* ನಿತ್ಯ ಒಂದು ಸಿಲಿಂಡರ್​ ಮಾತ್ರ ಪೂರೈಕೆ

* ಕಟ್ಟಿಗೆ ಒಲೆಯಲ್ಲೇ ಮುಂದುವರಿದ ಅಡುಗೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನದಿಂದ ರೇಶನಿಂಗ್​ ಪದ್ಧತಿಯಲ್ಲಿ ಹೋಟೆಲ್​ ಮಾಲೀಕರಿಗೂ ಸಹ ವಾಣಿಜ್ಯ ಬಳಕೆಯ ಸಿಲಿಂಡರ್​ ಗ್ಯಾಸ್​ ಪೂರೈಕೆ ಮಾಡಲಾಗುತ್ತಿದೆ. ಸುಮಾರು 25 ದಿನಗಳಿಂದ ಕಟ್ಟಿಗೆಯ ಒಲೆಯ ಮೂಲಕವೇ ಹೋಟೆಲ್​ ಉದ್ಯಮ ಮುಂದುವರಿಸಿದ್ದ ಮಾಲೀಕರಲ್ಲಿ ಇದೀಗ ತುಸು ನಿರಾಳತೆ ಕಂಡುಬಂದಿದೆ. 
ಜಿಲ್ಲೆಯ ಗ್ಯಾಸ್​ ಏಜೆನ್ಸಿಯವರಿಗೆ ಶೇ.70-75ರಷ್ಟು ಗ್ಯಾಸ್​ ಲೋಡ್​ ಪೂರೈಕೆ ಆಗುತ್ತಿದ್ದು, ಹೋಟೆಲ್​ಗಳಿಗೂ ಆದ್ಯತೆಯ ಮೇರೆಗೆ ಕನಿಷ್ಠ ಪ್ರಮಾಣದಲ್ಲಿ ವಿತರಣೆ ಮಾಡತೊಡಗಿದ್ದಾರೆ. 

ಕಟ್ಟಿಗೆ ಒಲೆಯೇ ಆಸರೆ

ಹೋಟೆಲ್​ಗಳಿಗೆ ಗ್ಯಾಸ್​ ಸಿಲಿಂಡರ್​ ಪೂರೈಕೆ ಆರಂಭಗೊಂಡಿದ್ದರೂ ಸಹ ಕಟ್ಟಿಗೆ ಒಲೆಯಿಂದ ಅಡುಗೆ ಕಾರ್ಯ ನಿಂತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಅನ್ನ ಹಾಗೂ ಸಾಂಬಾರ್​ಗಳನ್ನು ಕಟ್ಟಿಗೆ ಒಲೆಯಲ್ಲೇ ಮಾಡುತ್ತಿದ್ದಾರೆ. ಗ್ರಾಹಕರಿಗೆ ಈ ಮೊದಲು ಮೆನುವಿನಲ್ಲಿದ್ದ ಒಂದೆರಡು ತಿಂಡಿ ಮಾತ್ರ ಸಿದ್ಧಪಡಿಸಿ ಕೊಡುತ್ತಿದ್ದ ಹೋಟೆಲ್​ನವರು ನಿಧಾನಕ್ಕೆ ಮೆನುವಿನಲ್ಲಿದ್ದ ಬಹುತೇಕ ತಿಂಡಿ, ಊಟೋಪಹಾರ ಸಿದ್ಧಪಡಿಸುತ್ತಿದ್ದಾರೆ. 

 1-2 ಸಿಲಿಂಡರ್​ ಮಾತ್ರ ಪೂರೈಕೆ

ಜಿಲ್ಲೆಯ ಗ್ಯಾಸ್​ ಏಜೆನ್ಸಿಯವರಿಗೆ ವಾರಕ್ಕೆ 15ರಿಂದ 16 ಲೋಡ್​ ಕಮರ್ಷಿಯಲ್​ ಸಿಲಿಂಡರ್​ ಗ್ಯಾಸ್​ ಬರುತ್ತಿತ್ತು. ಆದರೆ, ಯುದ್ಧದ ಪರಿಣಾಮದಿಂದಾಗಿ ಕಳೆದ 20 ದಿನದಿಂದ 4ರಿಂದ 5 ಲೋಡ್​ ಮಾತ್ರ ಬರುತ್ತಿತ್ತು. ಅದನ್ನು ಆಸ್ಪತ್ರೆ, ಹಾಸ್ಟೆಲ್​, ವಸತಿ ಶಾಲೆಗಳಿಗೆ ರೇಶನಿಂಗ್​ ಮೂಲಕ ನೀಡಲಾಗುತ್ತಿತ್ತು. ಇದೀಗ ಏಜೆನ್ಸಿಯವರಿಗೆ ವಾರಕ್ಕೆ 12-13ರಷ್ಟು ಲೋಡ್​ ಬರುತ್ತಿದ್ದು ರೇಶನಿಂಗ್​ ಮೂಲಕ ಹೋಟೆಲ್​ನವರಿಗೂ ನೀಡಲಾಗುತ್ತಿದೆ. ನಿತ್ಯ 5 ಸಿಲಿಂಡರ್​ ಬೇಕಾದವರಿಗೆ ಕನಿಷ್ಠ 1, ಗರಿಷ್ಠ 2 ಪೂರೈಸಲು ಸಾಧ್ಯವಾಗುತ್ತಿದೆ. ಸಮಸ್ಯೆ ನಿವಾರಣೆ ಆಗುವವರೆಗೂ ಪರಿಸ್ಥಿತಿ ಹೀಗೆಯೇ ಇರಲಿದೆ ಎನ್ನುತ್ತಾರೆ ಎಚ್​ಪಿ ಗ್ಯಾಸ್​ನ ಪಾಲುದಾರರಾದ ರಾಘವೇಂದ್ರ ಗ್ಯಾಸ್​ ಏಜೆನ್ಸಿಯ ಮಾಲೀಕ ವಿಷ್ಣು ಆಚಾರ್ಯ.

ಮನೆಗಳಿಗೆ ಪೂರೈಕೆಯಲ್ಲಿ ವಿಳಂಬ

ಕಮಿರ್ಷಿಯಲ್​ ಗ್ಯಾಸ್​ ಪೂರೈಕೆಯಲ್ಲಿ ಸಮಸ್ಯೆ ಇದ್ದರೂ ಗೃಹ ಬಳಕೆಯ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಗ್ರಾಹಕರು ಬುಕಿಂಗ್​ ಮಾಡಿ ಒಟಿಪಿ ಬಂದಿದ್ದರೂ ಸಹ ಏಜೆನ್ಸಿಯವರಿಂದ ಮನೆಗೆ ವಿತರಣೆ ಆಗಲು ಕನಿಷ್ಠ 10 ದಿನ ವಿಳಂಬ ಆಗುತ್ತಿದೆ. ಒಂದೇ ಸಿಲಿಂಡರ್​ ಹೊಂದಿರುವ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಯುದ್ಧ ಮುಗಿದು, ತೈಲ ಸಮಸ್ಯೆ ನಿವಾರಣೆ ಆಗುವವರೆಗೂ ಸಹ ಬುಕಿಂಗ್​ ಅವಧಿಯ ಮಾನದಂಡ ಮುಂದುವರಿಯಲಿದೆ. ಒಂದು ಸಿಲಿಂಡರ್​ ಇರುವವರು 25 ದಿನದ ಬಳಿಕ, 2 ಸಿಲಿಂಡರ್​ ಇರುವವರು 35 ದಿನದ ಬಳಿಕವೇ ಬುಕಿಂಗ್​ ಮಾಡಬೇಕಿದೆ.

ಕಮರ್ಷಿಯಲ್​ ದರ ಏರಿಕೆ

ಕಮರ್ಷಿಯಲ್​ ಸಿಲಿಂಡರ್​ ದರ 1,874 ರೂ. ಇದ್ದದ್ದು 203 ರೂ. ಏರಿಕೆಯಾಗಿದ್ದು, ಇದೀಗ 2.077 ರೂ. ಆಗಿದೆ. ಗ್ರಹ ಬಳಕೆಯ ದರ ಯಾಥಾಸ್ಥಿತಿಯಲ್ಲಿದ್ದು, 916 ರೂ.ಗೆ ಬಿಲ್ಲಿಂಗ್​ ಆಗುತ್ತಿದೆ.
"

ನಮಗೆಲ್ಲರಿಗೂ ಪಾಠ... 

ಯಾವುದೇ ಉತ್ಪನ್ನಗಳಿಗೆ ಪರಾವಲಂಬಿಯಾದರೆ ಹೇಗೆ ಸಮಸ್ಯೆಯಾಗುತ್ತದೆ ಎನ್ನುವುದನ್ನು ಹೋಟೆಲ್​ನವರು ಅರಿತಿದ್ದೇವೆ. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಆಗುತ್ತಿದ್ದರೂ ಭಾರತದಲ್ಲಿ ತಿಂಗಳಿಂದ ಅಡುಗೆ ಅನಿಲ ಸಮಸ್ಯೆಯಾಗಿದೆ. ಇದು ನಮಗೆಲ್ಲರಿಗೂ ಜೀವನದ ಅರಿವು ಮೂಡಿಸಿದ ಪಾಠವಾಗಿದೆ. ಯುದ್ಧದ ವಿಷಮ, ಸಂದಿಗ್ಧ ಸ್ಥಿತಿಯಲ್ಲೂ ಸರ್ಕಾರ ತೈಲ ಆಮುದು ಮಾಡಿಕೊಳ್ಳುತ್ತಿದೆ. ದೇಶಕ್ಕೆ ಎದುರಾದ ಸಂಕಷ್ಟಕ್ಕೆ ನಾವೆಲ್ಲ ಸ್ಪಂದಿಸಬೇಕಿದೆ. ಕೆಲ ದಿನಗಳಲ್ಲಿ ಸಿಲಿಂಡರ್​ ಸಮಸ್ಯೆ ನಿವಾರಣೆಯಾಗಿ ಹೋಟೆಲ್​ ಉದ್ಯಮ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net