

ಉಡುಪಿ: ಪಕ್ಷದಲ್ಲಿ ಹಂತ ಹಂತವಾಗಿ ತೊಡಗಿಸಿಕೊಂಡು ನಾನಿಂದು ಈ ಹಂತ ತಲುಪಲು ದಿ.ಆಸ್ಕರ್ ಫೆರ್ನಾಂಡೀಸ್ ಅವರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಬೆಂಬಲ ಕಾರಣ. ನನ್ನ ರಾಜಕೀಯ ಜೀವನ ಪ್ರಾರಂಭದೊಂದಿಗೆ ಪ್ರಸ್ತುತ ಕರಾವಳಿ ಪ್ರದೇಶದ ಸ್ಥಳಿಯಾಡಳಿತ ಚುನಾಯಿತ ಪ್ರತಿನಿಧಿಗಳ ಬೆಂಬಲದಿಂದ ಪರಿಷತ್ಗೆ ಸ್ಪರ್ಧಿಸಿದಾಗ ಕರಾವಳಿಯ ಜನತೆ ನನಗೆ ಆಶೀರ್ವದಿಸಿದ್ದರಿಂದ ಮುಖ್ಯ ಸಚೇತಕ ಸ್ಥಾನ ಲಭಿಸುವಂತಾಗಿದೆ ಎಂದು ಮಂಜುನಾಥ ಭಂಡಾರಿ ಹೇಳಿದರು.
ಉಡುಪಿಯ ಬ್ರಹ್ಮಗಿಹಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶನಿವಾರ (ನ.29) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕರ್ತರಿಗೆ ಸ್ಪಂದನೆ
ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರ ಕ್ಷೇತ್ರದಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದಾಗ ನನಗೆ ರಾಜಕೀಯದ ಯಾವುದೇ ಅಭಿಲಾಷೆ ಇರಲಿಲ್ಲ. ಯುವ ಕಾಂಗ್ರೆಸ್ ಪದಾಧಿಕಾರಿಯಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಸಮರ್ಪಣಾ ಭಾವದಿಂದ ಪಕ್ಷ ಸಂಟನೆಯಲ್ಲಿ ತೊಡಗಿಕೊಂಸಡ ಸಂದರ್ಭದಲ್ಲಿ ಸಚೇತಕ ಸ್ಥಾನ ದೊರೆತಿದೆ. ನನ್ನ ಈ ಅಧಿಕಾರದ ಅವಧಿಯಲ್ಲಿ ಕಾರ್ಯಕರ್ತರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಪ್ರತಿ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ಸ್ಥಾಪಿಸಲು ಸ್ಥಳ ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಬ್ಲಾಕ್ ಅಧ್ಯಕ್ಷರ ಸಹಕಾರದಲ್ಲಿ ಕಟ್ಟಡ ಕಾಮಗಾರಿ ನೆರವೇರಲಿದೆ ಎಂದರು.
ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ ಕೊಡವೂರು, ಬಲರಾಜ, ಗೋಪಾಲ ಪೂಜಾರಿ, ಶೇಖರ ಮಡಿವಾಳ, ರಾಜು ಪೂಜಾರಿ, ದಿನೇಶ ಹೆಗ್ಡೆ ಮುಳವಳ್ಳಿ, ದಿನಕರ ಹೇರೂರು, ರಮೇಶ ಕಾಂಚನ್, ವೈ.ಸುಕುಮಾರ, ಗೋಪಿನಾಥ ಭಟ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಹರಿಪ್ರಸಾದ್ ರೈ, ಹಬೀಬ್ ಅಲಿ, ಪ್ರಖ್ಯಾತ ಶೆಟ್ಟಿ, ಕಿಶೋರ ಎರ್ಮಾಳ, ಮೀನಾಕ್ಷಿ ಮಾಧವ ಬನ್ನಂಜೆ, ಮಹಾಬಲ ಕುಂದರ್, ಗೀತಾ ವಾಗ್ಳೆ, ರೋಶನಿ ಒಲಿವೆರಾ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಸ್ವಾಗತಿಸಿದರು. ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ ಕಿಣಿ ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ವಂದಿಸಿದರು.