

ಉಡುಪಿ: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನಹಡಗಲಿ ಜಿಲ್ಲಾ ಘಟಕ ಉಡುಪಿ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ನಿಮಿತ್ತ ನೀಡುವ ಉಡುಪಿ ಜಿಲ್ಲಾಮಟ್ಟದ ಶಿಕ್ಷಕ ಸಾಹಿತಿ ಪ್ರಶಸ್ತಿಗೆ ಭಾಗ್ಯಶ್ರೀ ಕಂಬಳಕಟ್ಟ ಆಯ್ಕೆಯಾಗಿದ್ದಾರೆ.
ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವರ್ಷ ಶಿಕ್ಷಕಿಯಾಗಿ, 2 ವರ್ಷ ಪ್ರಭಾರ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆದಿಉಡುಪಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದು, ನಿವೃತ್ತ ಬ್ಯಾಂಕ್ ಉದ್ಯೋಗಿ ಕಂಬಳಕಟ್ಟದ ಹರಿಕೃಷ್ಣ ಭಟ್ ಮತ್ತು ತುಳಸಿ ದಂಪತಿ ಸುಪುತ್ರಿಯಾಗಿದ್ದಾರೆ.
ಏಳನೇ ತರಗತಿಯಲ್ಲಿರುವಅಗಲೇ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರು, ಪದವಿ ವ್ಯಾಸಂಗದ ಅವಧಿಯಲ್ಲಿ 'ಅಂತರಂಗದ ಹೊನಲು' ಚುಟುಕು ಸಂಕಲನ ಪ್ರಕಟಿಸಿದ್ದು, ಇದಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನ್ಯಾನೋ ಕಥೆ, ಕವನ ವಾಚನ, ಹಾಸ್ಯ ಚುಟುಕುಗಳಲ್ಲೂ ಗಮನ ಸೆಳೆದಿದ್ದಾರೆ. ರಾಜ್ಯಮಟ್ಟದ 'ಕಾರ್ಡ್ನಲ್ಲಿ ಕಥೆ ಬರೆಯುವ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಉಡುಪಿ ಜಿಲ್ಲಾಮಟ್ಟದ 'ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ' ಸೇರಿದಂತೆ ವಿವಿಧ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಸಾಧನೆ ಗುರುತಿಸಿ 'ಶಿಕ್ಷಕ ಸಾಹಿತಿ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನ.29ರಂದು ಉಡುಪಿ ಗೀತಾ ಮಂದಿರದ 6ನೇ ಮಹಡಿಯಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾ ಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.