

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಪ್ರಕಾಶ್ರಾಜ್ಗೆ ಮಾನವ ರತ್ನ, ಹಿದಾಯತುಲ್ಲಾ ಅಬ್ಬಾಸ್ಗೆ ಸೇವಾ ರತ್ನ, ಸುರೇಶ್ ಭಟ್ ಬಾಕ್ರಬೈಲ್ ಅವರಿಗೆ ಸೌಹಾರ್ದ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿವಿಧ ಸಮುದಾಯಗಳ ಸ್ನೇಹ ಸಮಾವೇಶವನ್ನು ಅ.31ರಂದು ಸಂಜೆ 6.30ಕ್ಕೆ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಗಣ್ಯರ ಸಮ್ಮುಖದಲ್ಲಿ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಚಂದ್ರಶೇಖರ ಶೆಟ್ಟಿ ಕುಂದಾಪುರ, ಬಿಪಿನ್ ಚಂದ್ರಪಾಲ್ ಕಾರ್ಕಳ, ಗೀತಾ ಸುರೇಶ್ ಕುಮಾರ್, ಜೆರಾಲ್ಡ್ ಪಿಂಟೋ, ಫಾತಿಮಾ ರಲಿಯಾ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಕಳೆದ 25 ವರ್ಷಗಳಿಂದ ಸಾಮಾಜಿಕ ಸೇವೆ, ಸಮುದಾಯದ ಏಕತೆ ಹಾಗೂ ವಿವಿಧ ಧರ್ಮಗಳ ನಡುವಿನ ಸೌಹಾರ್ದ ಮತ್ತು ಸಹಬಾಳ್ವೆಗಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಹಾಗೂ ವಿಶಾಲವಾದ ಕಚೇರಿ ಮತ್ತು ಸಭಾಂಗಣ ಹೊಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ಶಭೀ ಅಹ್ಮದ್ ಖಾಝಿ, ನಸೀರ್ ಅಹ್ಮದ್ ಕಾರ್ಕಳ, ಸಯ್ಯದ್ ಫರೀದ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಕಾರ್ಯದರ್ಶಿ ಜಫ್ರುಲ್ಲಾ ತೋನ್ಸೆ, ಖಜಾಂಚಿ ಇಕ್ಬಾಲ್ ಎಸ್.ಕೆ., ಸಂಘಟನಾ ಕಾರ್ಯದರ್ಶಿ ಜಮೀರ್ ಮೌಲಾನಾ, ಜಿಲ್ಲಾ ಸದಸ್ಯ ಪೀರು ಸಾಹೇಬ್, ಮಾಜಿ ಅಧ್ಯಕ್ಷ ಅಶ್ಪಕ್ ಅಹ್ಮದ್ ಹಾಗೂ ಟಿ.ಎಸ್.ಅನ್ಸಾರ್ ಉಪಸ್ಥಿತರಿದ್ದರು.