

ಉಡುಪಿ: ವಿಕೃತಿ ಇಲ್ಲದ ಭಾಷೆ ಸಂಸ್ಕೃತ . ಸಾವಿರಾರು ವರ್ಷಗಳಿಂದ ಎಂದೂ ವಿಕಾರ ಹೊಂದಿಲ್ಲ. ಮೂಲ ರೂಪದಲ್ಲೇ ಉಳಿದುಕೊಂಡಿದೆ. ಪಾಣಿನಿಯ ಅಷ್ಟಾಧ್ಯಾಯಿ ಕೃತಿಯಿಂದಾಗಿ ನಿತ್ಯ ಯೌವನ ಹೊಂದಿದೆ ಎಂದು ಎಸ್ ಎಂ ಎಸ್ ಪಿ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಎನ್. ಲಕ್ಷ್ಮೀನಾರಾಯಣ ಭಟ್ ಹೇಳಿದರು. -
ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷೆಗಳು ಅನೇಕ ವಿಧಗಳಲ್ಲಿ ಬಳಸಲ್ಟಟ್ಟರೆ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಇದಕ್ಕೆ ಪ್ರಾಕೃತ ಭಾಷೆ ಉತ್ತಮ ಉದಾಹರಣೆ. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಶಬ್ಧಗಳನ್ನು ನೀಡಿದೆ. ಆದರೆ ಯಾವ ಭಾಷೆಗಳಿಂದಲೂ ಶಬ್ಧಗಳನ್ನು ತೆಗೆದುಕೊಳ್ಳುವುದಿಲ್ಲ. ಇದು ಸಂಸತ ವೈಶಿಷ್ಟ್ಯವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಸ್ಕೃತ ಒಂದೇ ರೀತಿಯಲ್ಲಿ ಬಳಸಲ್ಪಡುತ್ತದೆ ಎಂದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜೆಕ್ಕಳ ಗಿರೀಶ ಭಟ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕಿಂತ ವಿಜ್ಞಾನ ಕ್ಷೇತ್ರದಲ್ಲೇ ಹೆಚ್ಚು ಮಹತ್ವದ ಮತ್ತು ಉಪಯುಕ್ತ ಕೆಲಸಗಳು ನಡೆದಿದ್ದರೂ, ವಿಜ್ಞಾನಿಗಳ ಹೆಸರು ಹಾಗೂ ಅವರ ಸಾಧನೆ ಮಾತ್ರ ಹೊರಜಗತ್ತಿಗೆ ಅಷ್ಟಾಗಿ ತಿಳಿಯುವುದಿಲ್ಲ. ಸಾಹಿತ್ಯದಲ್ಲಿ ಸಂಶೋಧನೆ ಮಾಡಬೇಕಾದರೆ ಕೇವಲ ಕಲ್ಪನೆ ಇದ್ದರೆ ಸಾಲದು, ಆದರೆ ವಿಜ್ಞಾನದ ಸಂಶೋಧನೆಗಳಲ್ಲಿ ವೈಜ್ಞಾನಿಕ ಕಲ್ಪನೆಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪ ಕೆಲಸ ಮಾಡಿದರೂ ಅವರ ಹೆಸರು ಹೆಚ್ಚು ಪ್ರಚಾರಕ್ಕೆ ಬರುತ್ತದೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಉಪಯುಕ್ತವಾದ ಆವಿಷ್ಕಾರಗಳನ್ನು ಮಾಡಿದವರ ಹೆಸರುಗಳು ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ ಎಂದು ಹೇಳಿದರು.
ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸ್ ಎಂ ಎಸ್ ಪಿ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಎನ್. ಲಕ್ಷ್ಮೀನಾರಾಯಣ ಭಟ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜೆಕ್ಕಳ ಗಿರೀಶ ಭಟ್, ಹಿರಿಯ ಸಾಹಿತಿ, ಅನುವಾದಕ ಡಾ. ಎನ್. ಟಿ. ಭಟ್ ಅವರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ಪ್ರವರ್ತಕ ಡಾ. ಎ.ವಿ, ನಾವಡ, ಉದ್ಯಮಿ ವಿಶ್ವನಾಥ ಶೆಣೈ, ಎನ್ಐಟಿಕೆ ಮಾಜಿ ನಿರ್ದೇಶಕ ಎಚ್. ಸುಧಾಕರ್ ನಾಯಕ್, ಎನ್ಟಿ ಭಟ್ ಪುತ್ರ ಡಾ. ಮಹಾದೇವ ಭಟ್, ಹಿರಿಯ ಯಕ್ಷಗಾನ ಕಲಾವಿದ ಪ್ರೊ. ಎಂ.ಎಲ್. ಸಾಮಗ, ಕಸಾಪ ತಾಲೂಕು ಅಧ್ಯಕ್ಷ ಎಚ್.ಪಿ. ರವಿರಾಜ್ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.