

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ತಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಕುದ್ರು ಸರ್ಕಾರಿ ಪ್ರೌಢಶಾಲೆಯ ಕೊಠಡಿಯನ್ನು ವರ್ಷದ ಹಿಂದೆ ಸುಣ್ಣಬಣ್ಣ ಬಳಿದು ನವೀಕರಣಗೊಳಿಸಿದ್ದರೂ ಗ್ರಾಮ ಗ್ರಂಥಾಲಯ ಸೇವೆಗೆ ತೆರೆದುಕೊಂಡಿಲ್ಲ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು, ಗ್ರಂಥಾಲಯ ಪಾಳುಬಿದ್ದ ಸ್ಥಿತಿಯಲ್ಲಿದೆ.
ಗ್ರಾಮೀಣ ಜನರಲ್ಲಿ ಜ್ಞಾನ ವೃದ್ಧಿಸುವ ಹಾಗೂ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿಯೂ ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಆದರೆ, ಉಪ್ಪಿನಕುದ್ರು ಗ್ರಾಮ ಗ್ರಂಥಾಲಯದಲ್ಲಿ ಸಿಬ್ಬಂದಿ ಹಾಗೂ ಅಗತ್ಯ ಸೌಲಭ್ಯಗಳಿಲ್ಲದೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನವೀಕರಣಗೊಂಡು ಬಳಕೆಗೆ ಸಿದ್ಧವಾಗಿದ್ದ ಕಟ್ಟಡ ಈಗ ನಿರ್ವಹಣೆಯಿಲ್ಲದೆ ಸೇವೆಯಿಂದ ದೂರವಾಗಿದೆ.
ಗ್ರಾಪಂ ವ್ಯಾಪ್ತಿಯ ವಸತಿ ಪ್ರದೇಶಗಳಿಗೆ ಅನುಕೂಲವಾಗುವ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಗ್ರಂಥಾಲಯ ಪ್ರತಿ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕನಿಷ್ಠ ನಾಲ್ಕು ಗಂಟೆಗಳ ಕಾಲ ತೆರೆದಿರಬೇಕು. ಆದರೆ, ಉಪ್ಪಿನಕುದ್ರು ಗ್ರಾಮ ಗ್ರಂಥಾಲಯ ನವೀಕರಣಗೊಂಡು ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ.
ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನಡಿ ರಾಜ್ಯದಲ್ಲಿ 6,500ಕ್ಕೂ ಮಿಕ್ಕಿ ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಗ್ರಾಮ ಗ್ರಂಥಾಲಯಗಳ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಹಾಗೂ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸುವುದು. ಇಲ್ಲಿ ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿರಬೇಕು. ವಿದ್ಯಾರ್ಥಿಗಳಿಗೆ ಪಠ್ಯೇತರ ಓದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳು ದೊರೆಯಬೇಕು. ಸಾರ್ವಜನಿಕರಿಗೆ ಓದುವ ಹಾಗೂ ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುವ ಸೌಲಭ್ಯವೂ ಇರಬೇಕು. ಗ್ರಾಮ ಗ್ರಂಥಾಲಯ ಕೇವಲ ಪುಸ್ತಕ ಓದುವ ಸ್ಥಳವಲ್ಲ. ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ರೈತರು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಒದಗಿಸುವ ಜ್ಞಾನಕೇಂದ್ರವೂ ಹೌದು. ಹೀಗಾಗಿ ಗ್ರಂಥಾಲಯದ ಸಮರ್ಪಕ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಒದಗಿಸುವುದು ಅಗತ್ಯ.