

ಉಡುಪಿ: ಕಟ್ಟಿದುದನ್ನು ಪುನರ್ಚಿಂತನೆಯ ಮೂಲಕ ಹೊಸದಾಗಿ ಕಟ್ಟುವ ಕಲೆ ಸಾಹಿತ್ಯಕ್ಕಿದೆ. ಪ್ರಶ್ನೆ ಕೇಳುವುದಷ್ಟೇ ಮುಖ್ಯವಲ್ಲ, ಅವುಗಳಿಗೆ ಉತ್ತರ ಹುಡುಕುವ ಪ್ರಯತ್ನವೂ ಅಗತ್ಯ. ಮೊಬೈಲ್ ಬಳಕೆಯ ತ್ವರಿತ ಆಕರ್ಷಣೆಯ ನಡುವೆ ಪುಸ್ತಕಗಳನ್ನು ದೀರ್ಘಕಾಲದ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ಪುಸ್ತಕಗಳು ಏಕಾಗ್ರತೆಯನ್ನು ಬೆಳೆಸುವ ಉತ್ತಮ ಸಂಗಾತಿಗಳು ಎಂದು ಕಾರ್ಕಳದ ಭುವನೇಂದ್ರ ಕಾಲೇಜ್ನ ಉಪನ್ಯಾಸಕಿ ಹಾಗೂ ಲೇಖಕಿ ಸುಲೋಚನಾ ಪಚ್ಚಿನಡ್ಕ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡು ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ (ಅ,17) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದರು.
ಓದುವ ಹವ್ಯಾಸದಿಂದ ಸಂವೇದನೆ, ಆಲಿಸುವ ಸಾಮರ್ಥ್ಯ ಮತ್ತು ಸೌಜನ್ಯ ಸಂವಹನ ವೃದ್ಧಿಯಾಗಲಿದೆ. ಸಾಹಿತ್ಯವು ಪ್ರಶ್ನಿಸುವ, ವಿಶ್ಲೇಷಿಸುವ ಮತ್ತು ಹೋಲಿಕೆಯ ಮನೋಭಾವ ಬೆಳೆಸುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು ಬದುಕಿನ ಸವಾಲು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಮದು ಸಲಹೆ ನೀಡಿದರು.
ಮಾನವೀಯ ಮೌಲ್ಯ ವೃದ್ಧಿ
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಬಿ. ಪ್ರಸನ್ನ ಮಾತನಾಡಿ, ಸಾಹಿತ್ಯವು ಮಾನವೀಯತೆಯತ್ತ ಕರೆದೊಯ್ಯುವ ಶಕ್ತಿಯಾಗಿದೆ. ದುರ್ವರ್ತನೆಯಿಂದ ದೂರ ಸರಿಸಿ ಮಾನವೀಯ ಮೌಲ್ಯ ಬೆಳೆಸುವಲ್ಲಿ ಮಹತ್ವದ್ದಾಗಿದೆ. ವ್ಯಕ್ತಿತ್ವ ನಿರ್ಮಾಣವೇ ಸಾಹಿತ್ಯದ ಉದ್ದೇಶವಾಗಬೇಕು ಎಂದರು.
ಸಾಹಿತ್ಯ ಸಂಘದ ಸಂಚಾಲಕಿ ರಮ್ಯಾ ಕೆ. ಐತಾಳ ಮಾತನಾಡಿ, ಸಾಹಿತ್ಯದ ಕಲ್ಪನಾಶಕ್ತಿಯಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕಿ ರೇಖಾ ಎಸ್.ಎನ್. ಉಪಸ್ಥಿತರಿದ್ದರು. ಭವ್ಯಶ್ರೀ ಭಾವಗೀತೆ ಹಾಡಿದರು. ನಿಖಿತಾ ಸ್ವಾಗತಿಸಿದರು. ಇಂಚರ ಪರಿಚಯಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನಾ ವಂದಿಸಿದರು.