

ಬಂಟ್ವಾಳ: ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಘೋಷಣೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಭಾನುವಾರ ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡುವಿನಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಸಮಿತಿಯ ಪದಾಧಿಕಾರಿಗಳ ಮಾಹಿತಿ ಪತ್ರ ಬಿಡುಗಡೆ ಮಾಡುವುದರ ಮೂಲಕ ಸ್ವಾಗತ ಸಮಿತಿಯ ಅಧಿಕೃತ ಘೋಷಣೆ ಮಾಡಿದರು. ಮಂಚಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಲಾಯಿತು.
ಕಳೆದ ಬಾರಿ ಅಮ್ಮುಂಜೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕರಾಗಿದ್ದ ಅಬೂಬಕ್ಕರ್ ಅಮ್ಮುಂಜೆ ಸಾಹಿತ್ಯ ಸಮ್ಮೇಳನದ ಆಯೋಜನೆ ಎನ್ನುವುದು ಜೇನು ಸಂಗ್ರಹಿಸುವ ಕಾರ್ಯದಂತೆ. ಯಶಸ್ವಿಯಾದರೆ ಎಲ್ಲರಿಗೂ ಜೇನು ಹಂಚಿದಂತೆ. ಕೆಲವೊಮ್ಮೆ ಒಂದೆರಡು ಜೇನಿನ ದಾಳಿಯ ನೋವನ್ನು ಅನುಭವಿಸಲು ಸಿದ್ಧರಾಗಿರಬೇಕು ಎಂದರು.
ಸಂಕಪ್ಪ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿದರು. ಮಂಚಿ ಕೊಳ್ನಾಡು ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಶೀಲಾ ವಿಟ್ಲ ಹಾಗೂ ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಸರ್ಕಳ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಚಿ ಸಮಿತಿ ಸದಸ್ಯರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ನಾರ್ಶ ಕಾರ್ಯಕ್ರಮ ನಿರ್ವಹಿಸಿದರು.