

ಸಂಡೂರು: ಅಪೌಷ್ಟಿಕ ಮಕ್ಕಳನ್ನು ಸಹಜ ಸ್ಥಿತಿಗೆ ತರುವ ಗುರಿ ಹೊಂದಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ್ ಹೇಳಿದರು.
ಪಟ್ಟಣದ ಪರಿಶಿಷ್ಟ ವರ್ಗದ ಕಲ್ಯಾಣ ಕಚೇರಿಯಲ್ಲಿ ಬಾಲ ಚೈತನ್ಯ ಶಿಬಿರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ತಾಲೂಕಿನಲ್ಲಿ 79 ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ.
ಇವರಲ್ಲಿ ಯಾವ ರೋಗದ ಸಮಸ್ಯೆಯಿದೆ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಕೊಡಿಸುವ ಜತೆಗೆ 14 ದಿನ ಪೌಷ್ಟಿಕ ಆಹಾರ ಕೊಡಲಾಗುವುದು. ಅಲ್ಲದೆ ಶಿಬಿರದಲ್ಲಿ ಪಾಲ್ಗೊಳ್ಳುವ ತಾಯಂದಿರಿಗೆ ಪೌಷ್ಟಿಕ ಆಹಾರ ತಯಾರಿ ವಿಧಾನ ತಿಳಿಸಿಕೊಡಲಾಗುವುದು ಎಂದರು.
ಟಿಎಚ್‌ಒ ಭರತ್ ಕುಮಾರ್ ಮಾತನಾಡಿ, ಮಕ್ಕಳ ಆರೋಗ್ಯ ಸುಧಾರಣೆಗೆ ಇಲಾಖೆ ಶಕ್ತಿಮೀರಿ ಶ್ರಮಿಸುತ್ತಿದೆ. ಮಕ್ಕಳು ಮತ್ತು ತಾಯಂದಿರಿಗೆ ಲಸಿಕಾಕರಣ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ತಜ್ಞರು ಹಾಗೂ ಆರೋಗ್ಯ ಶಿಕ್ಷಣಾಧಿಕಾರಿಗಳಿಂದ ಇಲಾಖೆ ಸೇವೆಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದರು.
ಸಿಡಿಪಿಒ ಎಳೆನಾಗಪ್ಪ ಮಾತನಾಡಿ, ಶಿಬಿರದ 14 ದಿನ ಕೇಂದ್ರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿದೆ. ಮಕ್ಕಳ ಆರೈಕೆ ಬಗ್ಗೆ ಪಾಲಕರಿಗೆ ಆರೋಗ್ಯ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಪೌಷ್ಟಿಕ ಆಹಾರದ ಮಾದರಿಗಳನ್ನು ಪ್ರದರ್ಶಿಸಲಾಯಿತು. ಸರ್ಕಾರಿ ಆಸ್ಪತ್ರೆ ವೈದ್ಯೆ ರಮ್ಯಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರವಿಕುಮಾರ್, ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಉಷಾ, ಅಂಗನವಾಡಿ ಮೇಲ್ವಿಚಾರಕಿಯರಾದ ಮಲ್ಲಮ್ಮ ಭಜಂತ್ರಿ, ಶರಣಬಸವೇಶ್ವರಿ, ಲಕ್ಷ್ಮೀ ಕಂಕಣವಾಡಿ, ಲಕ್ಷ್ಮೀ ಪರಸಣ್ಣನವರ್, ಗೀತಾ ಆರ್ಕಚಾರಿ, ಎ.ಪಿ.ಕಂಬಾರ್, ಶಾರದಾ ಸಿಂಧೆ, ಚೇತನ ಗೌಡ್ರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರ್‌ಕೆಎಸ್‌ಕೆ ಕೋಆರ್ಡಿನೇಟರ್ ಮನೋಹರ್ ಇತರರಿದ್ದರು.