ಅಸಾನಿ ಚಂಡಮಾರುತ ಸೃಷ್ಟಿ: 27 ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

Asani
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ ಅಸಾನಿ ಚಂಡಮಾರುತವಾಗಿ ಸೃಷ್ಟಿಯಾಗಿದೆ.

ಉತ್ತರ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರಾವಳಿ ಓರಿಸ್ಸಾದತ್ತ ಮಾರುತಗಳು ಚಲಿಸಲಿದ್ದು, ಆ ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ. ಗಾಳಿಯ ವೇಗ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು ತಕ್ಷಣ ವಾಪಸ್ ಬರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕದಲ್ಲಿಯೂ ಉತ್ತಮ ವರ್ಷಧಾರೆ ಬರಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ಕಲಬುರಗಿ ಮತ್ತು ಬೀದರ್‌ನಲ್ಲಿ ಮೇ 9ರಂದು ಭಾರಿ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಯಾದಗಿರಿ, ರಾಯಚೂರು ಮತ್ತು ವಿಜಯಪುರ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಚಾಮರಾಜನಗರದ ಹರದನಹಳ್ಳಿಯಲ್ಲಿ 62 ಮಿಮೀ, ಮೈಸೂರಿನ ಹುಣಸೂರಿನಲ್ಲಿ 35 ಮಿಮೀ, ಮಂಡ್ಯದ ಕೆ.ಆರ್.ಪೇಟೆಯಲ್ಲಿ 30 ಮಿಮೀ ಮತ್ತು ತುಮಕೂರಿನ ಮಧುಗಿರಿಯಲ್ಲಿ 26 ಮಿಮೀ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net