ಕಾಸ್ಮೋಸ್​ ಸಹಕಾರಿ ಬ್ಯಾಂಕ್​ ಜತೆ ನ್ಯಾಷನಲ್​ ಬ್ಯಾಂಕ್​ ವಿಲೀನ

cosmos
Published on

ಬೆಂಗಳೂರು:ದಿ ನ್ಯಾಷನಲ್​ ಕೋ ಆಪರೇಟಿವ್​ ಬ್ಯಾಂಕ್​ನ್ನು ಕಾಸ್ಮೋಸ್​ ಸಹಕಾರಿ ಬ್ಯಾಂಕ್​ ಜತೆ ವಿಲೀನ ಮಾಡಲಾಗಿದೆ.

ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಅನುಮತಿಯೊಂದಿಗೆ ಈ ವಿಲೀನ ಪ್ರಕ್ರಿಯೆ ನಡೆದಿದೆ. ನ್ಯಾಷನಲ್​ ಬ್ಯಾಂಕಿನ ಎಲ್ಲ 13 ಶಾಖೆಗಳು ಸೋಮವಾರದಿಂದ ಕಾಸ್ಮೋಸ್​ ಬ್ಯಾಂಕಿನ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರು ಮತ್ತು ಠೇವಣಿದಾರರು ನಮ್ಮ ಬ್ಯಾಂಕಿನ ಎಲ್ಲ ಸೌಲಭ್ಯಗಳನ್ನು ಪಡೆಯಬಹುದು. 2024ರ ನವೆಂಬರ್​ ಅಂತ್ಯಕ್ಕೆ ನ್ಯಾಷನಲ್​ ಕೋ ಆಪರೇಟಿವ್​ ಬ್ಯಾಂಕಿನ ಒಟ್ಟು ವ್ಯವಹಾರ 1,326 ಕೋಟಿ ರೂ.ರಷ್ಟಿದೆ. 800 ಕೋಟಿ ರೂ.ಠೇವಣಿದಾರರ ಠೇವಣಿ ಹಣ ಇದೆ. ಈ ವಿಲೀನದಿಂದ ಠೇವಣಿದಾರರು ಅಂದಾಜು 792 ಕೋಟಿ ರೂ.ಭದ್ರತೆ ಪಡೆದುಕೊಂಡಿದ್ದಾರೆ. 119 ವರ್ಷ ಹಳೆಯದಾದ ನಮ್ಮ ಬ್ಯಾಂಕ್​ ಜತೆ ಈವರೆಗೆ 18 ಸಣ್ಣ ಸಹಕಾರಿ ಬ್ಯಾಂಕ್​ಗಳು ವಿಲೀನವಾಗಿವೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಸಿಎ.ಮಿಲಿಂದ್​ ಕಾಳೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಸ್ಮೋಸ್​ ಬ್ಯಾಂಕಿನ ಅಧ್ಯಕ್ಷ ಪ್ರಹ್ಲಾದ್​ ಕೋಕರೆ ಮಾತನಾಡಿ, ವಿಲೀನದಿಂದಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ಸೇರಿ ದೇಶದ 7 ರಾಜ್ಯಗಳಲ್ಲಿ 183 ಶಾಖೆಗಳನ್ನು ಹೊಂದಿದೆ. ಮಹಾರಾಷ್ಟ್ರ ಮೂಲದ ನಮ್ಮ ಬ್ಯಾಂಕ್​, ದೇಶದ 2ನೇ ಅತಿ ದೊಡ್ಡ ಸಹಕಾರಿ ಬ್ಯಾಂಕ್​ ಆಗಿದೆ. ನ್ಯಾಷನಲ್​ ಬ್ಯಾಂಕ್​ನಲ್ಲಿ ಬಾಕಿ ಉಳಿಸಿಕೊಂಡಿರುವ ಠೇವಣಿದಾರರ ಹಣವನ್ನು ವಾಪಸ್​ ಕೊಡಲಾಗಿದೆ. ಆ ಬ್ಯಾಂಕಿನ ಉದ್ಯೋಗಿಗಳು ನಮ್ಮ ಬ್ಯಾಂಕಿನಲ್ಲೇ ಮುಂದುವರಿಯಲಿದ್ದಾರೆ. ಕಾಸ್ಮೋಸ್​ ಬ್ಯಾಂಕಿನ ಆರ್ಥಿಕ ಸ್ಥಿತಿ ಬಲಿಷ್ಠವಾಗಿದೆ. 2024ರ ಮಾರ್ಚ್​ ಅಂತ್ಯಕ್ಕೆ ಒಟ್ಟು ವ್ಯವಹಾರವು 35,400 ಕೋಟಿ ರೂ.ದಾಟಿದೆ. 350 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಷೇರು ಬಂಡವಾಳ, ಸ್ವಂತ ನಿಧಿಗಳು 2 ಸಾವಿರ ಕೋಟಿ ರೂ.ಇದೆ ಎಂದು ವಿವರಿಸಿದರು.

ಬ್ಯಾಂಕಿನ ಕರ್ನಾಟಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಉಮೇಶ್​ ಬೆಲ್ಲೆ, ವ್ಯವಸ್ಥಾಪಕ ನಿರ್ದೇಶಕಿ ಅಪೇತಾ ತಿಪ್ಸೆ, ನಿರ್ದೇಶರಾದ ಪ್ರವಿಣ್​ ಗಾಂಧಿ, ಸಚಿನ್​ ಅಪ್ಟೆ ಮತ್ತಿತರರಿದ್ದರು.

ದೇಶದಲ್ಲೇ ಮಹಾರಾಷ್ಟ್ರ, ಗುಜರಾತ್​,ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳಾಗಿವೆ. ನಮ್ಮ ಬ್ಯಾಂಕಿನಲ್ಲಿ ಒಟ್ಟು 18 ಲಕ್ಷಕ್ಕೂ ಅಧಿಕ ಗ್ರಾಹಕರು ಇದ್ದಾರೆ. 2024ರ ಮಾ.31ಕ್ಕೆ ಬ್ಯಾಂಕಿನ ನಿವ್ವಳ ಎನ್​ಪಿಎ ಶೇ.1.54ರಷ್ಟಿದೆ. ಹಿರಿಯ ನಾಗರಿಕರು ಇಡುವ ಭದ್ರತಾ ಠೇವಣಿ ಹಣಕ್ಕೆ ಶೇ.8ರಷ್ಟು ಬಡ್ಡಿ ನೀಡಲಾಗುವುದು. ಸಣ್ಣ, ಮಧ್ಯಮ ಮತ್ತು ದೀರ್ಘ ಕಾಲದ ಅವಧಿಯ ಠೇವಣಿ ಇಡಬಹುದು. ಗ್ರಾಹಕರಿಗಾಗಿ ಬ್ಯಾಂಕಿನಲ್ಲಿ ವಿಶೇಷ ಸೌಲಭ್ಯಗಳಿವೆ. ನಮ್ಮ ಬ್ಯಾಂಕ್​ "ಎ' ವರ್ಗದಲ್ಲಿದೆ.

| ಸಿಎ.ಯಶವಂತ್​ ಕಾಸರ್​. ಕಾಸ್ಮೋಸ್​ ಸಹಕಾರಿ ಬ್ಯಾಂಕ್​ ಉಪಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net