

ಬೆಂಗಳೂರು: ರಾಜ್ಯದ ಹಲವೆಡೆ ಮುಂದುವರಿದಿರುವ ಚಳಿ ಮುಂದಿನ 5 ದಿನ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದ್ದು, ಈ ಮೂಲಕ ರಾಜ್ಯ ಮತ್ತಷ್ಟು ಥಂಡಿಗೆ ನಲುಗುವಂತಾಗಿದೆ.
ವಿಜಯಪುರ 10, ಚಿಕ್ಕಮಗಳೂರು 10, ಹಾವೇರಿ 10.8, ಧಾರವಾಡ 11.4, ಶಿವಮೊಗ್ಗ 11.8, ಬೆಳಗಾವಿ 11.8 ಚಿತ್ರದುರ್ಗ 12.1, ಮಂಡ್ಯ 12.2, ಚಾಮರಾಜನಗರ 12.2, ಮಡಿಕೇರಿ 12.4, ಚಿಂತಾಮಣಿ 12.5, ಮೈಸೂರು 12.6, ಬಾಗಲಕೋಟೆ 12.6, ಗದಗ 12.6, ಬೀದರ್ 13, ಆಗುಂಬೆ 13, ಬೆಂಗಳೂರು 14.4 ಮತ್ತು ಕೊಪ್ಪಳ 14.5 ಡಿ.ಸೆ. ಉಷ್ಣಾಂಶ ಕನಿಷ್ಠ ತಾಪಮಾನದಲ್ಲಿ ಸೋಮವಾರ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಸರಾಸರಿ 4-5 ಡಿ.ಸೆ.ಉಷ್ಣಾಂಶ ಕುಸಿತವಾಗಿದೆ. ಹಗಲು ಮತ್ತು ರಾತ್ರಿ ವೇಳೆ ತಣ್ಣನೆ ಗಾಳಿ ಬೀಸುತ್ತಿದ್ದು, ಜನರಿಗೆ ಮೈ ನಡುಗುವ ಅನುಭವವಾಗುತ್ತಿದೆ. ಪ್ರಸ್ತುತ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸುತ್ತಿದ್ದು, ಮುಂಜಾನೆ ಅವಧಿಯಲ್ಲಿ ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ.
ಶುಭ್ರ ವಾತಾವರಣ:
ರಾಜ್ಯದಲ್ಲಿ ಪ್ರಸ್ತುತ ಮಳೆ ಸಂಪೂರ್ಣ ಕ್ಷೀಣವಾಗಿದ್ದು,ಶುಭ್ರ ವಾತಾವರಣ ಕಾಣಿಸಿಕೊಂಡಿದೆ. ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವ ಕಾರಣದಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಇದ್ದರೂ ಅದರ ಪ್ರಖರತೆ ಕಡಿಮೆ ಇದೆ. ಪ್ರಸ್ತುತ ತಿಂಗಳಿನ ಮಾಸಾಂತ್ಯವರೆಗೆ ಚಳಿಯ ತೀವ್ರತೆ ಹೆಚ್ಚಿರಲಿದ್ದು, ನಂತರ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ 18 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಗಣನೀಯವಾಗಿ ಕುಸಿತವಾಗಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಕನಿಷ್ಠ ತಾಪಮಾನದಲ್ಲಿ 10ರಿಂದ 12 ಡಿ.ಸೆ.ಉಷ್ಣಾಂಶ ದಾಖಲಾಗಲಿದೆ. ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ 12ರಿಂದ 14 ಡಿ.ಸೆ.ತಾಪಮಾನ ವರದಿಯಾಗಲಿದೆ.ಬೆಳಗ್ಗೆ ಮಂಜು ಕವಿದ ವಾತಾವರಣ ಇರಲಿದೆ.
| ಸಿ.ಎಸ್.ಪಾಟೀಲ್.ಹವಾಮಾನ ಇಲಾಖೆ ನಿರ್ದೇಶಕ.