

ಹುಣಸೂರು : ಅಸಮಾನತೆ ಮತ್ತು ಮೇಲು-ಕೀಳೆಂಬ ಮನೋಭಾವ ಹೋಗಲಾಡಿಸಿ ಪ್ರತಿಯೊಬ್ಬರಿಗೂ ಗೌರವ, ಸಮಾನ ಅವಕಾಶ ದೊರೆಯುವಂತಹ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದಲ್ಲಿ ಭಾನುವಾರ ಶ್ರೀ ಚಿಕ್ಕದೇವಮ್ಮ ಹಾಗೂ ಭೈರವೇಶ್ವರಸ್ವಾಮಿ ದೇವಸ್ಥಾನದ ಉದ್ಘಾಟನೆ ಮತ್ತು ದೇವಾಲಯದ ಗೋಪುರಕ್ಕೆ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಾತಿ, ಮತ, ಪಂಥ, ವರ್ಣ ಹಾಗೂ ವರ್ಗಗಳ ಬೇಧ ಭಾವ ಇಲ್ಲದೆ ಮಾನವರೆಲ್ಲರೂ ಒಂದೇ, ಮನುಷ್ಯ ಕುಲವೊಂದೇ ಎಂಬ ವಿಶಾಲ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಬುದ್ಧ, ಬಸವ, ವಾಲ್ಮೀಕಿ, ಕನಕದಾಸ, ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹನೀಯರು ಕಂಡ ಸಮಾನತೆ, ಸತ್ಯ, ಪ್ರಾಮಾಣಿಕತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ. ಅವು ಮನುಷ್ಯನ ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ಚಿಂತನೆ ಹಾಗೂ ಧಾರ್ಮಿಕ ಭಾವಗಳನ್ನು ಬೆಳೆಸುವ ಕೇಂದ್ರಗಳಾಗಿವೆ. ಪ್ರಸ್ತುತ ದಿನಗಳಲ್ಲಿ ಧಾರ್ಮಿಕ ಚಿಂತನೆಗಳ ಜತೆಗೆ ಸಮಾಜದಲ್ಲಿ ಅಧಃಪತನದತ್ತ ಸಾಗುತ್ತಿರುವ ನೈತಿಕ ಮೌಲ್ಯ ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಡಿನ ಮಠಾಧೀಶರು ಹಾಗೂ ಸ್ವಾಮೀಜಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠದ ಶ್ರೀ ಡಾ.ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾವಡಗೆರೆ ಗುರುಲಿಂಗ ಜಂಗಮ ದೇವರಮಠದ ಶ್ರೀ ನಟರಾಜ ಸ್ವಾಮೀಜಿ ಹಾಗೂ ಪಡುವಲ ಮಠದ ಮಹದೇವ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಶ್ರೀಗಳ ಮೂಲಕ ದೇವಾಲಯಕ್ಕೆ ಬೆಳ್ಳಿ ಕಡಗವನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರೇಮಕುಮಾರ್, ಜಿಪಂ ಮಾಜಿ ಸದಸ್ಯ ಬಿಳಿಗೆರೆ ಮಂಜು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್, ಮುಖಂಡರಾದ ಅಣ್ಣಯ್ಯನಾಯಕ ಹೊನ್ನಪ್ಪ, ಹರವೆ ಶಿವಣ್ಣ, ಹರವೆ ಶ್ರೀಧರ್, ಮರಿನಾಯ್ಕ, ರಾಜಣ್ಣ, ಶಿವಣ್ಣ, ರಾಮೇಗೌಡ, ಈಶ್ವರ್, ಮಲ್ಲಿಕಾರ್ಜುನ, ಉಪನ್ಯಾಸಕ ಲೋಕೇಶ್, ಶಾಂತೇಗೌಡ ಸೇರಿದಂತೆ ಗ್ರಾಮದ ಮುಖಂಡರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.