ಸಂವಿಧಾನದ ರಕ್ಷಣೆಗಾಗಿ 2ನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ದರಾಮಯ್ಯ ಕರೆ

ಸಂವಿಧಾನ ರಕ್ಷಣೆ.. ಬಿಜೆಪಿಗೆ ನೈತಿಕತೆ ಎಲ್ಲಿದೆ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿ 4ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜನೆ
ಸಂವಿಧಾನದ ರಕ್ಷಣೆಗಾಗಿ 2ನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ದರಾಮಯ್ಯ ಕರೆ
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಗುರುವಾರ ಆಯೋಜಿಸಿದ್ದ 4ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮSiddaramaiah calls for a second freedom struggle to protect the Constitution.
Published on: 

ಮೈಸೂರು: ಸಂವಿಧಾನ ಉಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು. ಈ ಮೂಲಕ ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಬೇಕು. ಇದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿ ಹೋರಾಟ ನಡೆಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಗುರುವಾರ ಆಯೋಜಿಸಿದ್ದ 4ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ, ಪ್ರಜಾಪ್ರಭುತ್ವ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ. ಸಂವಿಧಾನ, ಪ್ರಜಾಪ್ರಭುತ್ವ, ಸಾರ್ವಭೌಮತ್ವದ ರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕು. ಮೊದಲ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಸಂವಿಧಾನದ ರಕ್ಷಣೆಗಾಗಿ 2ನೇ ಸ್ವಾತಂತ್ರ್ಯ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಸಂವಿಧಾನ ಅಂಗೀಕಾರಗೊಂಡ ಸಂದರ್ಭದಲ್ಲಿ ಸಾವರ್ಕರ್ ಸೇರಿದಂತೆ ಹಿಂದುತ್ವವಾದಿ ನಾಯಕರು ಸಂವಿಧಾನವನ್ನು ಟೀಕಿಸಿದ್ದರು. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ ಎಂದು ಟೀಕಿಸಿದ್ದರು. ಆದರೆ, ಅದೇ ಬಿಜೆಪಿಯವರು ಸಂವಿಧಾನವನ್ನು ರಕ್ಷಿಸುವುದಾಗಿ ಹಾಗೂ ಅದರ ಆಶಯ ಈಡೇರಿಸುವುದಾಗಿ ಮಾತನಾಡುತ್ತಿದ್ದಾರೆ. ಇಂತಹವರಿಗೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಜಾತ್ಯತೀತತೆ, ಸಮಾನತೆಯ ಮೌಲ್ಯ ಪ್ರತಿಪಾದಿಸುತ್ತದೆ. ಆದರೆ ಬಿಜೆಪಿಯವರು ಈ ಮೌಲ್ಯಕ್ಕೆ ವಿರುದ್ಧವಾದ ಸಿದ್ಧಾಂತ ಹೊಂದಿದ್ದಾರೆ ಎಂದು ಟೀಕಿಸಿದರು.

ರಾಜಕೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯ ಎಂಬ ತತ್ವವನ್ನು ಒಪ್ಪಿಕೊಂಡಿದ್ದು, ಆದರೆ, ಸಾಮಾಜಿಕ, ಆರ್ಥಿಕ ಬದುಕಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಮೌಲ್ಯ ದೊರೆತಿಲ್ಲ. ಈ ವೈರುಧ್ಯವನ್ನು ಶೀಘ್ರವಾಗಿ ನಿವಾರಿಸದಿದ್ದರೆ ಅಸಮಾನತೆಯಿಂದ ನರಳುತ್ತಿರುವ ಜನರೇ ಸಂವಿಧಾನ ರಚನಾ ಸಭೆ ಶ್ರಮಪಟ್ಟು ನಿರ್ಮಿಸಿದ ರಾಜಕೀಯ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಧ್ವಂಸಗೊಳಿಸಲಿದ್ದಾರೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಅಧಿಕಾರಕ್ಕೆ ಬರುವ ಎಲ್ಲ ರಾಜಕೀಯ ಪಕ್ಷಗಳು ಈ ಮಾತು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರಲ್ಲಿ ಬದ್ಧತೆ ಇಲ್ಲದಿದ್ದರೆ ಅದರ ಆಶಯಗಳು ಈಡೇರುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ದೇಶದಲ್ಲಿ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.

ಸಾಮಾಜಿಕ, ಆರ್ಥಿಕ ಅಸಮಾನತೆ ನಿವಾರಣೆಯಾಗದೆ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾನ ಅವಕಾಶಗಳು ದೊರೆಯಬೇಕು. ಇಲ್ಲವಾದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಹಾಗೂ ಸಂವಿಧಾನ ರಚನೆಯಾಗಿದ್ದು ಸಾರ್ಥಕವಾಗಲ್ಲ ಎಂದು ಅಭಿಪ್ರಾಯಪಟ್ಟರು.

ಜಾತಿ ವ್ಯವಸ್ಥೆ, ಅಸಮಾನತೆ ನಿರ್ಮೂಲನೆಯಾಗದೆ ಗಾಂಧಿ, ನೆಹರು, ಅಂಬೇಡ್ಕರ್ ಅವರು ಕಂಡಿದ್ದ ಸಮಾನತೆಯ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ. ಈ ಮಹನೀಯರ ಆಶಯ ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಒಳಮೀಸಲಾತಿ ಭಿನ್ನಾಭಿಪ್ರಾಯ ಶಮನಕ್ಕೆ ಯತ್ನ:

ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಜಾರಿಗೆ ತಂದಿರುವ ಒಳಮೀಸಲಾತಿಯಿಂದಾಗಿ ಸಮುದಾಯಗಳ ನಡುವೆ ಕೆಲವು ಭಿನ್ನಾಭಿಪ್ರಾಯಗಳು ತಲೆದೋರಿವೆ. ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸುವ ಕೆಲಸವಾಗಬೇಕು. ಸಂವಿಧಾನವೇ ಅಪಾಯದಲ್ಲಿದೆ. ಅದರ ರಕ್ಷಣೆಗಾಗಿ ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ನಿಲ್ಲಬೇಕಿದೆ ಎಂದರು.

ಬಿಜೆಪಿ ಸಮಾಜದಲ್ಲಿ ದ್ವೇಷದ ಬೀಜ ಬಿತ್ತುವ ಮತ್ತು ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಪರ್ಯಾಯವಾಗಿ ಪ್ರೀತಿ, ಮಾನವೀಯತೆ, ಸಹೋದರತ್ವ ಬೆಳೆಸುವ ಕೆಲಸವಾಗಬೇಕು. ಸಮಾಜ, ಭಾರತವನ್ನು ಒಗ್ಗೂಡಿಸಬೇಕು. ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ಸಂವಿಧಾನ ರಚಿಸಿದ ಮಹನೀಯರ ಆಶಯಗಳಿಗೆ ಗೌರವ ಸಲ್ಲಿಸಬೇಕು ಎಂದರು.

ಸಂವಿಧಾನದ ಆಶಯಗಳಿಗೆ ಧಕ್ಕೆ: ಡಾ.ಯತೀಂದ್ರ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಸರ್ಕಾರದ ಪ್ರಯತ್ನಗಳೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಅಥವಾ ಅಪಾಯ ಎದುರಾದಾಗಲೆಲ್ಲ ಅದರ ರಕ್ಷಣೆಗಾಗಿ ಧ್ವನಿ ಎತ್ತುವ ಬದ್ಧತೆ ಕಾಂಗ್ರೆಸ್ ಹೊಂದಿದೆ. ವಿದ್ಯಾರ್ಥಿಗಳು, ದುರ್ಬಲ ವರ್ಗಗಳ ಹಿತದೃಷ್ಟಿಯಿಂದ ಬಸ್ ಪಾಸ್ ಸೇರಿದಂತೆ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.

ಸಂವಿಧಾನವು ಕೇವಲ ಲಿಖಿತ ದಾಖಲೆಯಲ್ಲ, ಅದೊಂದು ಜೀವಂತ ಗ್ರಂಥ. ಸಂವಿಧಾನವನ್ನು ಗೌರವಿಸುವುದರೊಂದಿಗೆ ಅದರ ಆಶಯವನ್ನು ಚಾಚೂತಪ್ಪದೆ ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.

ನಾವು ಸಂವಿಧಾನವನ್ನು ರಕ್ಷಿಸಿದರೆ ಮಾತ್ರ ನಾವು ಎಲ್ಲರೂ ಸುರಕ್ಷಿತವಾಗಿ ಬದುಕಲು ಸಾಧ್ಯ. ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು, ಸ್ವಾಭಿಮಾನದ ಬದುಕಿಗೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಭದ್ರ ಬುನಾದಿಯಾಗಿದೆ. ಸಂವಿಧಾನದ ಆಶಯ ಪ್ರತಿಯೊಬ್ಬರೂ ಅರಿತುಕೊಂಡು ಅವುಗಳ ಅನುಷ್ಠಾನಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ರೈತರ ಕಣ್ಣಲ್ಲಿ ಸಂವಿಧಾನ:

ಕಾವೇರಿ ಕೊಳ್ಳದ ರೈತರ ಹಿತಾಸಕ್ತಿ ರಕ್ಷಣೆ, ಮೇಕೆದಾಟು ಯೋಜನೆಯ ಅನುಷ್ಠಾನ, ಉತ್ತರ ಕರ್ನಾಟಕದಿಂದ ಬಯಲುಸೀಮೆಯ ಬರಪೀಡಿತ ಹಳ್ಳಿಗಳವರೆಗೆ ಪ್ರತಿ ಎಕರೆಗೂ ನೀರು ಹರಿಸಲು ಸರ್ಕಾರ ಕಟಿಬದ್ಧ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸಂವಿಧಾನವನ್ನು ರೈತರ ಕಣ್ಣಲ್ಲಿ ನೋಡುತ್ತೇನೆ. ನೈಸರ್ಗಿಕ ಸಂಪನ್ಮೂಲಗಳು ಕೇವಲ ಕೆಲವೇ ಬಂಡವಾಳಶಾಹಿಗಳ ಪಾಲಾಗದೆ, ಕಟ್ಟಕಡೆಯ ರೈತನ ಹೊಲಕ್ಕೂ ನ್ಯಾಯಯುತವಾಗಿ ಹಂಚಿಕೆಯಾಗಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ನೀರಿನ ಪಾಲು, ತೆರಿಗೆಯ ಪಾಲಿಗಾಗಿ ಸಂವಿಧಾನಾತ್ಮಕ ಹೋರಾಟ ಮುಂದುವರಿಯಲಿದೆ ಎಂದರು.

ಬಸವಣ್ಣನವರ ಸಮಾನತೆಯ ತತ್ವ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ನ್ಯಾಯದ ಪರಂಪರೆ, ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಅಂಬೇಡ್ಕರ್ ಅವರ ಸಂವಿಧಾನ ನಮಗೆ ದಾರಿದೀಪವಾಗಲಿ. ಸುಳ್ಳು ಸುದ್ದಿಗಳು, ವಿಭಜಕ ಶಕ್ತಿಗಳಿಗೆ ಕಿವಿಗೊಡದೆ ಸಂವಿಧಾನ ಉಳಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.

ಸಂವಿಧಾನದ ಆಶಯ ಸಾಕಾರಗೊಂಡಿಲ್ಲ:

ಜಾಗೃತಗೊಂಡಿರುವ ಜೆನ್-ಜಿ ಯುವಪೀಳಿಗೆ, ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಜೈ ಭೀಮ್ ಘೋಷಣೆಗಳೊಂದಿಗೆ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಇಳಿದಿರುವುದು ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.

ಸಂವಿಧಾನ ಜಾರಿಯಾಗಿ 77 ವರ್ಷಗಳು ಕಳೆದರೂ ಅಸ್ಪಶ್ಯತೆ, ಸಾಮಾಜಿಕ ಪಿಡುಗುಗಳು, ಆರ್ಥಿಕ ಅಸಮಾನತೆ, ಶಿಕ್ಷಣದಲ್ಲಿನ ತಾರತಮ್ಯದಿಂದಾಗಿ ಸಂವಿಧಾನದ ಮೂಲ ಆಶಯ ಇಂದಿಗೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂದರು.

ಸಂವಿಧಾನದ ಮೂಲ ಆಶಯವನ್ನು ಜನಸಾಮಾನ್ಯರಿಗೆ ತಲುಪಿಸುವಂತೆ ದಶಕಗಳಿಂದ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಭಾಗವಾರು ರಾಜ್ಯಮಟ್ಟದ ಸಂವಿಧಾನ ದಿನವನ್ನು ವಿಜೃಂಭಣೆಯಿಂದ ಆಚರಿಸಿದೆ ಎಂದರು.