ಮೈಸೂರು: ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ ಸಹೋದರತ್ವದ ಮೌಲ್ಯ ಎತ್ತಿಹಿಡಿಯುವ ಸಂವಿಧಾನ ದಿನವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಬೃಹತ್ ಸಮಾವೇಶದ ರೂಪದಲ್ಲಿ ಆಚರಿಸಿ ಗಮನ ಸೆಳೆಯಲಾಯಿತು.
ಜಾತಿ, ಧರ್ಮ, ಭಾಷೆ, ಆರ್ಥಿಕ ಅಸಮಾನತೆಗಳಂತಹ ಸವಾಲುಗಳು ಮುಂದುವರಿದಿರುವ ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂಬ ಸಂದೇಶವನ್ನು ಕಾರ್ಯಕ್ರಮ ಕಟ್ಟಿ ಕೊಟ್ಟಿತು.
ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಸಾಕ್ಷಿಯಾದರು.
ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ, ಮಾಜಿ ಸಿಎಂ, ಸಚಿವರು, ಸಂವಿಧಾನ ರಕ್ಷಣೆ ಮಾಡಿ, ಅದನ್ನು ಪರಿಣಾಮಕಾರಿ ಜಾರಿಯಾಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದರು. ಸಂವಿಧಾನ, ಲೋಕತಂತ್ರ ಎದುರಾಗಿರುವ ಆಪತ್ತಿನ ಕುರಿತು ಆತಂಕ ವ್ಯಕ್ತಪಡಿಸಿದ ನಾಯಕರು, ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಯೋಜಿಸಿದ್ದ ಸಂವಿಧಾನದ ಭವ್ಯ ಮೆರವಣಿಗೆ ಕಣ್ಮನ ಸೆಳೆಯಿತು. ಪುರಭವನದಲ್ಲಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹಾಗೂ ಅಲ್ಲೇ ಇರುವ ಬೃಹತ್ ಸಂವಿಧಾನ ಪೀಠಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸಂವಿಧಾನ ಪೀಠಿಕೆಯ ಪ್ರತಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು. ನಗರದ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಗೆ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳ ಸೊಬಗು ತಂದುಕೊಟ್ಟವು.
ಬಳಿಕ ಆಯೋಜಿಸಿದ್ದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂವಿಧಾನವು ನಮ್ಮೆಲ್ಲರ ನ್ಯಾಯದ ಆಧಾರ, ಸಮಾನತೆಯ ಭಂಡಾರ. ಪ್ರಜಾಪ್ರಭುತ್ವಕ್ಕೆ ಶಕ್ತಿಯ ಸಂಚಾರವಾಗಿದೆ. ಇದು ನಮ್ಮೆಲ್ಲರ ಪಾಲಿಗೆ ಪವಿತ್ರ ಗ್ರಂಥ. ದೇಶದ ಒಂದು ಅಂತರಾತ್ಮ ಎಂದು ಬಣ್ಣಿಸಿದರು.
ದೇಶದ 140 ಕೋಟಿ ಜನರ ಘನತೆ, ಗೌರವ, ಹಕ್ಕು ಕಾಪಾಡುವ ಶಕ್ತಿ ಇರುವುದು ಸಂವಿಧಾನಕ್ಕೆ ಮಾತ್ರ. ಪ್ರತಿಯೊಬ್ಬರ ಬದುಕಿನಲ್ಲೂ ದೀಪ ಬೆಳಗಬೇಕು. ಜತೆಗೆ, ಶೋಷಿತರು, ವಿದ್ಯಾವಂತರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಸಂವಿಧಾನದ ಆಶಯ. ಈ ಹಿನ್ನೆಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ ಎಂದರು.
ಸಂವಿಧಾನ ಉಳಿದರೆ ದೇಶದ ಸಮಗ್ರತೆ, ಸಮಾನತೆ ಉಳಿಯುತ್ತದೆ. ವ್ಯಕ್ತಿ ಪೂಜೆಗಿಂತ ದೇಶ ಸಂರಕ್ಷಣೆಗೆ ಸರ್ಕಾರ ಬದ್ಧ. ಅಂಬೇಡ್ಕರ್ ತೋರಿಸಿರುವ ದಾರಿ ಬಿಟ್ಟು ಹೋಗಲ್ಲ ಎಂದು ಭರವಸೆ ಕೊಟ್ಟರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಇಡೀ ದೇಶದಲ್ಲಿ ಸಂವಿಧಾನ ದಿನವನ್ನು ಆಚರಣೆ ಮಾಡಬೇಕು. ಕೇಂದ್ರ ಸರ್ಕಾರವು ಈ ಕುರಿತು ಆದೇಶ ಹೊರಡಿಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಸಂವಿಧಾನ, ಪ್ರಜಾಪ್ರಭುತ್ವ, ಅಂಬೇಡ್ಕರ್ ವಿರೋಧಿಸುತ್ತಿದ್ದವರು ಈಗ ಈ ಮೂರು ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ. ಹೀಗಾಗಿ, ಅವರ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸರ್ಕಾರದಿಂದ ಬೇರೆ ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡರೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಯಾವುದೂ ಕಡಿಮೆಯಾಗಬಾರದು. ಈ ವಿಷಯದಲ್ಲೂ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಸಿಎಂಗೆ ವೇದಿಕೆ ಮೇಲೆಯೇ ಡಿಸಿಎಂ ಒತ್ತಾಯಿಸಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ಎಸ್.ಬಸವಂತಪ್ಪ, ನರೇಂದ್ರಸ್ವಾಮಿ, ಟಿ.ರಘುಮೂರ್ತಿ, ಸತೀಶ್ ಜಾರಕಿಹೊಳಿ, ಪುಟ್ಟರಂಗಶೆಟ್ಟಿ, ರಿಜ್ವಾನ್ ಹರ್ಷದ್, ಕೆ.ಎಂ.ಶಿವಲಿಂಗೇಗೌಡ, ಯು.ಟಿ.ಖಾದರ್, ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಿಎಂ ಮುಖ್ಯ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಸಂಸದರಾದ ಸುನೀಲ್ ಬೋಸ್, ಶ್ರೇಯಸ್ ಪಟೇಲ್, ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಶಾಸಕರಾದ ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಕೆ.ವೆಂಕಟೇಶ್ ಇತರರಿದ್ದರು
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಹಂತ ಹಂತವಾಗಿ ಸಂವಿಧಾನವನ್ನು ದುರ್ಬಲಗೊಳಿಸಲಾಗುತ್ತಿದೆ. ಇದನ್ನು ಬದಲು ಮಾಡಿದರೆ ರಕ್ತಪಾತವಾಗುತ್ತದೆ ಎಂದು ಬಿಜೆಪಿ, ಆರ್ಎಸ್ಎಸ್ಗೆ ತಿಳಿದಿದೆ. ಅದಕ್ಕಾಗಿಯೇ ಈ ದುಷ್ಕೃತ್ಯಕ್ಕೆ ಕೈ ಹಾಕಿದೆ. ಇದನ್ನು ತಡೆದು, ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ದೇಶದಲ್ಲಿ 2ನೇ ಸ್ವಾತಂತ್ರೃ ಹೋರಾಟ ನಡೆಸಬೇಕಿದೆ ಎಂದು ಕರೆಕೊಟ್ಟರು.
ಬಿಜೆಪಿ ದ್ವೇಷ, ಅಸೂಯೆ ಬಿತ್ತುವ ಮೂಲಕ ಸಮಾಜವನ್ನು ವಿಘಟಿಸುತ್ತಿದೆ. ನಾವುಗಳು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ, ಪ್ರಜ್ಞಾಪ್ರಭುತ್ವವನ್ನು ಸಾವರ್ಕರ್, ಕೇಶವ್ ಹೆಡ್ಗೇವಾರ ಸೇರಿದಂತೆ ಆರ್ಎಸ್ಎಸ್, ಬಿಜೆಪಿಯವರು ವಿರೋಧಿಸಿದ್ದು, ಇದೀಗ ಇದರ ಕುರಿತು ಮಾತನಾಡುವ ನೈತಿಕತೆಯೇ ಅವರಿಗಿಲ್ಲ ಎಂದು ಹರಿಹಾಯ್ದರು.