

ತಿ.ನರಸೀಪುರ: ಕನಕದಾಸರು ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಾಕಾರಗೊಳ್ಳಲು ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳಲ್ಲಿ ಶಿಕ್ಷಣ, ಸಂಘಟನೆ ಜತೆಗೂ ರಾಜಕೀಯ ಪ್ರಜ್ಞೆ ಬೆಳೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಂತಶ್ರೇಷ್ಠ ಶ್ರೀ ಭಕ್ತ ಕನಕದಾಸರ 539ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ತಳ ಸಮುದಾಯಗಳು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.
ಕನಕದಾಸರು ಐದು ಶತಮಾನಗಳ ಬಳಿಕವೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಕೇವಲ ಸಂತರು, ದಾರ್ಶನಿಕರು ಅಥವಾ ಸಾಹಿತಿಗಳಾಗಿರದೆ, ತಮ್ಮ ಕೀರ್ತನೆ ಹಾಗೂ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆ, ಶೋಷಣೆ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಜಾತಿ ವ್ಯವಸ್ಥೆ, ಶೋಷಣೆ ವಿರುದ್ಧದ ಕನಕದಾಸರ ಹೋರಾಟ ಪ್ರಸ್ತುತ ಎಂದರು.
ವಚನಕಾರ ಬಸವಣ್ಣನವರ ಬಳಿಕ ಕನಕದಾಸರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಆಶಯಗಳು ನಮ್ಮ ಸಂವಿಧಾನದಲ್ಲಿ ಪ್ರತಿಫಲಿಸಿವೆ. ಸಂವಿಧಾನದ ಆಶಯಗಳಿಂದಲೇ ಶೋಷಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆಯಲು ಅವಕಾಶವಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ರೈತರು ಒಗ್ಗಟ್ಟಿನಿಂದ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ತಮ್ಮ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಮಹನೀಯರ ಚರಿತ್ರೆ ಮಕ್ಕಳಿಗೆ ತಲುಪಲಿ: ಕುದೇರು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಿ.ಪುರುಷೋತ್ತಮ ವಿಶೇಷ ಉಪನ್ಯಾಸ ನೀಡಿ, ಮಹನೀಯರ ಜಯಂತಿಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತವೆ. ಕುರುಬ ಸಮುದಾಯಕ್ಕೆ ಶ್ರೀಮಂತ ಹಿನ್ನೆಲೆಯಿದ್ದು, ಚಕ್ರವರ್ತಿ ಅಶೋಕ, ಚಂದ್ರಗುಪ್ತ ಮೌರ್ಯ, ಸಂಗೊಳ್ಳಿ ರಾಯಣ್ಣ, ಹಕ್ಕ-ಬುಕ್ಕ, ಗೊಲ್ಲಾಳೇಶ್ವರ, ಕಾಳಿದಾಸ ಹಾಗೂ ಕನಕದಾಸರಂತಹ ಮಹನೀಯರ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಹೇಳಿದರು.
ಹಾಲುಮತ ಸಂಸ್ಕೃತಿಯ ಸಂಕೇತ ಉಳಿಸಿ: ಕಾಗಿನೆಲೆ ಶಾಖ ಮಠದ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಸಮುದಾಯದ ಮಹನೀಯರ ಇತಿಹಾಸ, ಸಾಧನೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಮಹನೀಯರ ಜೀವನಚರಿತ್ರೆ ಹಾಗೂ ಕೃತಿಗಳ ಓದು ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದರು.
ಹಾಲುಮತ ಸಂಸ್ಕೃತಿಯ ಪ್ರಮುಖ ಸಂಕೇತಗಳಾದ ಕಂಬಳಿ ಮತ್ತು ಡೊಳ್ಳು ವಾದ್ಯಗಳ ಪರಂಪರೆಯನ್ನು ಉಳಿಸುವಂತೆ ಯುವಜನರಿಗೆ ಕರೆ ನೀಡಿದರು.
ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಮಾತನಾಡಿ, ಕನಕದಾಸರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಅವರ ಸಂದೇಶವು ಜಾತಿ ಭೇದಭಾವ ತೊಡೆದುಹಾಕಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯದಿಂದ ಬದುಕುವಂತೆ ಪ್ರೇರೇಪಿಸುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಕನಕದಾಸರ ಪ್ರತಿಮೆಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವಿದ್ಯೋದಯ ಕಾಲೇಜು ಆವರಣಕ್ಕೆ ತರಲಾಯಿತು. ವಿವಿಧ ಜಾನಪದ ಕಲಾತಂಡಗಳೊಂದಿಗೆ ಲಿಂಕ್ ರಸ್ತೆ ಹಾಗೂ ಕಾಲೇಜು ರಸ್ತೆಯಲ್ಲಿ ಸಾಗಿದ ಮೆರವಣಿಗೆ ಜಯಂತ್ಯೋತ್ಸವದ ಸಂಭ್ರಮ ಹೆಚ್ಚಿಸಿತು.
ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಮಣ್ಯ, ತಾಲೂಕು ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ಮಲ್ಲೇಶ್, ಎಂ.ಮಾದೇಶ್, ಎಂ.ವೆಂಕಟೇಶ್, ಎಂ.ನಾಗೇಶ್, ಸೌಭಾಗ್ಯಾ ದೊಡ್ಡಬಸವಯ್ಯ, ಪ್ರಧಾನ ಕಾರ್ಯದರ್ಶಿ ಬಸವರಾಜು, ಸಹ ಕಾರ್ಯದರ್ಶಿ ಎನ್.ಎಲ್. ಲಿಂಗಣ್ಣ, ನಿರ್ದೇಶಕರಾದ ಬಸವಣ್ಣ, ಕೆ.ನಂಜುಂಡಸ್ವಾಮಿ, ಗೋವರ್ಧನ್ ಸಂಜು, ಎಚ್.ಸಿ.ಅರುಣ್ ಕುಮಾರ್, ಪಿ.ಮಹೇಶ್, ಟಿ.ಎಂ.ನಂಜುಂಡಸ್ವಾಮಿ, ಟಿ.ಎಸ್.ಪ್ರಶಾಂತ್ ಬಾಬು, ಗೋಪಾಲ್, ಭಾಗ್ಯಾ ಹಾಳೇಗೌಡ, ನಾಗಮಣಿ, ನಾಗರಾಜು, ಎ.ಟಿ.ಮಂಜುನಾಥ್, ಮಾಲಿನಿ ನಾಗರಾಜ್, ಎಂ.ಬಿ.ಚಂದ್ರಶೇಖರ್, ಎಲ್.ಗುರುಮೂರ್ತಿ, ಸೌಮ್ಯಾ ಕುಮಾರ್, ಎಂ.ಬಸವಣ್ಣ, ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ಶಿವರಾಮ್, ಲೋಹಿತ್ , ಚಿಕ್ಕಸಿದ್ದೇಗೌಡ, ಸವಿತಾ ನಾಗರಾಜಗೌಡ, ಪದ್ಮಾ ಸಿದ್ದರಾಜು, ಕೆ.ನಾಗರಾಜು, ಅಶ್ವಿನ್ ಕುಮಾರ್, ಜಿ.ಮೀನಾಕ್ಷಿ ಬೋರೆಗೌಡ, ಮರಯ್ಯ, ಮಹದೇವಯ್ಯ, ರಜತ್ಸ್ವಾಮಿ, ಪ್ರಕಾಶ್, ಸೋಮಣ್ಣ, ಶಿವಕುಮಾರ್,ಕುಮಾರ್, ಪುಟ್ಟಮಲ್ಲಯ್ಯ, ರಾಘು, ಶಿವಕುಮಾರ್, ನಿಂಗರಾಜು, ಸೋಮಣ್ಣ, ಶಿವಮೂರ್ತಿ, ಶಂಕರ್, ಕುಮಾರ್, ಶಿವಶಂಕರ್ ಮೂರ್ತಿ, ವಸಂತ, ಮಂಜು, ಮನ್ನೆ ಶೇಖರ್, ಚಂದ್ರಮ್ಮ, ಶಿವಕುಮಾರ್, ಜಯಲಕ್ಷ್ಮೀ, ಮಹದೇವಮ್ಮ, ಮಂಜು, ಪ್ರಭಾಕರ್, ಬಾಬು, ಮಾದೇಶ್, ಶ್ರೀಕಂಠ, ಗುರು, ಲಕ್ಷ್ಮಣ್, ನಟ ಪುರಿ, ರವಿ, ಮಂಜುನಾಥ್, ಅಧಿಕಾರಿಗಳಾದ ವಿರೇಶ್, ಗೋವಿಂದರಾಜು, ಶಿವರಾಜು, ಡಾ.ಮಲ್ಲಿಕಾರ್ಜುನ, ಸತೀಶ್, ಶಿವಮೂರ್ತಿ, ಶಾಂತ, ಶ್ವೇತಾ, ಕುಮಾರಸ್ವಾಮಿ ಇತರರು ಇದ್ದರು.