ಶಿಕ್ಷಣದಿಂದ ಸ್ವಾಭಿಮಾನ ಬದುಕು ಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ

ಶ್ರೀ ಕನಕದಾಸರ ಜಯಂತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಶಿಕ್ಷಣದಿಂದ ಸ್ವಾಭಿಮಾನ ಬದುಕು ಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ
ಕನಕ ಜಯಂತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಸಿದ್ದರಾಮಯ್ಯ, ಕೆ.ಹರೀಶಗೌಡ, ಎಂ.ಕೆ.ಸೋಮಶೇಖರ, ಬೀರಿಹುಂಡಿ ಬಸವಣ್ಣ, ಎಂ.ಲಕ್ಷ್ಮಣ್ ಇತರರಿದ್ದರು A life of self-respect is possible through education: Former CM Siddaramaiah's view
Published on: 

ಮೈಸೂರು: ಶಿಕ್ಷಣದಿಂದ ಮಾತ್ರ ಜ್ಞಾನದ ವಿಕಾಸ, ಸ್ವಾತಂತ್ರೃ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ಕನಕದಾಸರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಪ್ತವಾದ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ. ಅಕ್ಷರ ಜ್ಞಾನ ಪಡೆದವರಿಗೆ ನೀತಿ, ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಅದು ಯಾರೊಬ್ಬರ ಸ್ವತ್ತಲ್ಲ. ಅದನ್ನು ಗುರುತಿಸಿ ಉತ್ತೇಜನ ನೀಡುವ ಕೆಲಸವಾಗಬೇಕು. ಆಗ ಮಾತ್ರ ಶೂದ್ರರೂ ಸಮಾಜದ ಮುಂಚೂಣಿಗೆ ಬರಲು ಸಾಧ್ಯ ಎಂದರು.

ಒಕ್ಕಲಿಗರು, ಕುರುಬರು ಸೇರಿದಂತೆ ತಳಸಮುದಾಯದವರೆಲ್ಲರೂ ಶೂದ್ರರರು. ಸಂಪತ್ತು, ಅಕ್ಷರದಿಂದ ಈ ಸಮುದಾಯದವರನ್ನು ವಂಚಿಸಲಾಯಿತು. ಮನುಸ್ಕೃತಿಯ ಪ್ರಕಾರ, ಶೂದ್ರರು ಓದುವುದು, ಸಂಪತ್ತು ಸಂಗ್ರಹ ನಿಷಿದ್ಧವಾಗಿತ್ತು. ಇದಕ್ಕೆ ಮೇಲ್ವರ್ಗವರು ಮಾತ್ರ ಅರ್ಹರು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಈ ವ್ಯವಸ್ಥೆಗೆ ಚಲನೆ ಬರುತ್ತದೆ. ಆದರೆ, ನಮ್ಮ ನಡುವಿನ ಪಟ್ಟಭದ್ರ ಹಿತಾಸಕ್ತಿಗಳು ಜಾತಿ ವ್ಯವಸ್ಥೆಗೆ ಸಾಮಾಜಿಕ, ಆರ್ಥಿಕ ಶಕ್ತಿ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಶತಮಾನಗಳ ಹಿಂದೆಯೇ ಕನಕದಾಸರು ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಹೀಗಾಗಿ, ಜಾತಿ ಮಾಡಬಾರದು. ಹಾಗೆಯೇ ನಡೆದು ಬಂದ ದಾರಿಯನ್ನೂ ಮರೆಯಬಾರದು. ಶೋಷಿತರು, ತುಳಿತಕೊಳ್ಳಗಾದವರ ಪರ ಕೆಲಸ ಮಾಡಬೇಕು ಎಂದು ಹೇಳಿದರು.

ತಳ ಸಮುದಾಯದವರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರದಿರುವುದೇ ಜಾತಿ ಪದ್ಧತಿಯೇ ಮುಖ್ಯ ಕಾರಣ. ಯಾರೂ ಜಾತಿ ಮಾಡಲು ಹೋಗಬಾರದು. ಇನ್ನೊಂದು ಜಾತಿ, ಧರ್ಮದವರನ್ನು ದ್ವೇಷಿಸಬಾರದು. ಅದಕ್ಕೆ ಅಂಟುಕೊಂಡಿರಬಾರದು. ಎಲ್ಲರೊಂದಿಗೆ ಸಮಾನರಾಗಿ ಬದುಕಬೇಕು. ಮನುಷ್ಯರಾಗಿ ಹುಟ್ಟಿದ ಮೇಲೆ ಪರಸ್ಪರ, ಪ್ರೀತಿ ವಿಶ್ವಾಸದಿಂದ ಜೀವಿಸಬೇಕು ಎಂದು ಹೇಳಿದರು.

ಜಾತಿ ನಿರ್ಮೂಲನೆ ಮಾಡಿ ಸಮ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಕನಕದಾಸರು, ಅಂಬೇಡ್ಕರ್ ಪ್ರಯತ್ನ ಮಾಡಿದ್ದರು. ಆದಾಗ್ಯೂ, ಜಾತಿ ವ್ಯವಸ್ಥೆ ಇನ್ನೂ ಬೇರೂರಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಅದು ಹೋಗಿಲ್ಲವೆಂದರೆ ಜಾತಿ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ ಎಂದರು.

ಶಾಸಕ ಕೆ.ಹರೀಶಗೌಡ, ಮಾಜಿ ಶಾಸಕ ಸೋಮಶೇಖರ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇತರರಿದ್ದರು