

ಹುಣಸೂರು: ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಎನ್ನುವುದು ಒಂದು ಗುಂಪಲ್ಲ, ಬದಲಾಗಿ ಅದೊಂದು ಕುಟುಂಬ ಎಂದು ಎನ್‌ಎಸ್‌ಎಸ್ ಸ್ವಯಂಸೇವಕ ಕೆ.ಎನ್.ಸಚಿನ್ ಅಭಿಪ್ರಾಯಪಟ್ಟರು.
ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಆಯೋಜಿದ್ದ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಸ್ವಾರ್ಥ ಸೇವೆಯ ಮತ್ತೊಂದು ಹೆಸರು ಎನ್‌ಎಸ್‌ಎಸ್. ಶಿಸ್ತು, ವ್ಯಕ್ತಿತ್ವ ವಿಕಸನ, ಶ್ರಮ, ಸೇವೆಯೇ ಎನ್‌ಎಸ್‌ಎಸ್‌ನ ಅಡಿಪಾಯ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ನಂತರದ ನಿಜಜೀವನವನ್ನು ಎದುರಿಸುವ ಕಲೆ ಎನ್‌ಎಸ್‌ಎಸ್ ಘಟಕಗಳ ಮೂಲಕ ಅರಿವು ಮೂಡಿಸಲಾಗುತ್ತದೆ. ನಾಯಕತ್ವ ಗುಣ ವಿದ್ಯಾರ್ಥಿ ದಿಸೆಯಲ್ಲಿಯೇ ಕರಗತ ಮಾಡಿಕೊಂಡಲ್ಲಿ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ನೀಡುವ ಜಾಣ್ಮೆ ಮತ್ತು ಶಕ್ತಿ ಬರಲಿದೆ. ಸಮಾಜ ನಿಮ್ಮನ್ನು ಸುಶಿಕ್ಷಿತರನ್ನಾಗಿ ಮಾಡುತ್ತದೆ. ನಿಮ್ಮಿಂದ ಸಮಾಜ ಇಂತಹ ಸೇವೆಗಳನ್ನು ನಿರೀಕ್ಷಿಸುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳು ಅರಿಯಬೇಕೆಂದರು.
ಕಾರ್ಯಕ್ರಮದಲ್ಲಿ ಬೆಸ್ಟ್ ಎನ್‌ಎಸ್‌ಎಸ್ ಸ್ವಯಂಸೇವಕಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಅಲಿಯಾ ತಾಜ್ ಮಾತನಾಡಿದರು. ಪ್ರಾಂಶುಪಾಲ ಡಾ.ಸ್ವಾಮಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಎನ್.ಶ್ರೀಕಾಂತ್, ಬಿ.ಕೆ.ಸಾಗರ್, ಪ್ರಾಧ್ಯಾಪಕರು ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಜರಿದ್ದರು.