

ಎಚ್.ಡಿ.ಕೋಟೆ : ಕೃಷಿ ಚಟುವಟಿಕೆಯಲ್ಲಿ ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಜತೆಗೆ ರೈತರ ಕೃಷಿ ವೆಚ್ಚದ ಹೊರೆ ತಗ್ಗಿಸಿ, ಆಧುನಿಕ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಗೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಲಾಗಿದೆ.
ಕೃಷಿ ಕೆಲಸಗಳಿಗೆ ದುಬಾರಿ ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದ ರೈತರು, ಅಗತ್ಯವಿರುವ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಕೃಷಿ ಚಟುವಟಿಕೆ ಕೈಗೊಳ್ಳಲು ಈ ಯೋಜನೆ ಅವಕಾಶ ಕಲ್ಪಿಸಲಿದೆ.
ಕೃಷಿ ಚಟುವಟಿಕೆಯಲ್ಲಿ ಯಾಂತ್ರೀಕರಣ ಅನಿವಾರ್ಯವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರೂ ದುಬಾರಿ ಕೃಷಿ ಯಂತ್ರೋಪಕರಣ ಖರೀದಿಸುವುದು ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಯಂತ್ರೋಪಕರಣ ಹೊಂದಿರುವವರು ಇತರ ರೈತರಿಗೆ ಸೇವೆ ಒದಗಿಸುವ ವ್ಯವಸ್ಥೆ ರೂಪಿಸುವ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ರೈತರನ್ನು ಯಾಂತ್ರೀಕೃತ ಕೃಷಿಯತ್ತ ಪ್ರೋತ್ಸಾಹಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಯಡಿ ಫೋಟ್ಸ್(ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ನೋಂದಣಿಯಾಗಿರುವ ಕನಿಷ್ಠ 20 ಗುಂಟೆಯಿಂದ ಗರಿಷ್ಠ 3 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಪ್ರತಿ ಎಕರೆಗೆ, ಪ್ರತಿ ಕೃಷಿ ಯಾಂತ್ರೀಕೃತ ಚಟುವಟಿಕೆಗೆ 500ರಂತೆ ಪ್ರೋತ್ಸಾಹಧನವನ್ನು ಡಿಬಿಟಿ(ನೇರ ನಗದು ವರ್ಗಾವಣೆ) ಮೂಲಕ ರೈತರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.
ಒಬ್ಬ ರೈತ ಮೂರು ಹಂತದಲ್ಲಿ ಸಹಾಯಧನ ಪಡೆಯಲು ಅವಕಾಶ ಇದೆ. ಉಳುಮೆ, ಕಟಾವು ಹಾಗೂ ಒಕ್ಕಣೆ ಈ ಸಮಯದಲ್ಲಿ ಮೂರು ಎಕರೆಗೆ 4,500 ಸಾವಿರ ರೂ. ಸಹಾಯಧನ ಪಡೆಯಬಹುದು. ಇದು ನೇರವಾಗಿ ಖಾತೆಗೆ ಜಮಾ ಆಗಲಿದೆ. ಟ್ರ್ಯಾಕ್ಟರ್ ಹೊಂದಿರುವ ರೈತರಿಗೂ ಸಹಾಯಧನ ಪಡೆಯಲು ಅವಕಾಶ ಇರುತ್ತದೆ.
ಆ್ಯಪ್ನಲ್ಲೇ ಬುಕಿಂಗ್
ಈ ಯೋಜನೆಯ ವಿಶೇಷತೆಯೆಂದರೆ, ರೈತರು ಕೃಷಿ ಯಂತ್ರೋಪಕರಣಗಳಿಗಾಗಿ ಅಲೆದಾಡುವ ಅಗತ್ಯವಿಲ್ಲ. ಓಲಾ, ಊಬರ್ ಆ್ಯಪ್ಗಳಲ್ಲಿ ಆಟೋ ಮತ್ತು ಟ್ಯಾಕ್ಸಿಗಳನ್ನು ಬುಕ್ ಮಾಡುವ ಮಾದರಿಯಲ್ಲಿಯೇ ಮುಖ್ಯಮಂತ್ರಿ ನೇಗಿಲಯೋಗಿ ಆ್ಯಪ್ ಮೂಲಕ ತಮಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣ ಬುಕ್ ಮಾಡಿಕೊಳ್ಳಬಹುದು. ಸ್ಥಳೀಯವಾಗಿ ನೋಂದಣಿಯಾಗಿರುವ ಸೇವಾದಾರರು ರೈತರ ಜಮೀನಿಗೆ ತೆರಳಿ ಕೃಷಿ ಚಟುವಟಿಕೆ ನಿರ್ವಹಿಸಲಿದ್ದಾರೆ.
ಟ್ರಾೃಕ್ಟರ್, ಪವರ್ ಟಿಲ್ಲರ್, ಭತ್ತ ನಾಟಿ ಯಂತ್ರ, ಸ್ವಯಂಚಾಲಿತ ರೀಪರ್ ಹಾಗೂ ಕಂಬೈನ್ಡ್ ಹಾರ್ವೆಸ್ಟರ್ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣ ಹೊಂದಿರುವ ವೈಯಕ್ತಿಕ ಮಾಲೀಕರು, ಸಂಘ-ಸಂಸ್ಥೆಗಳು ಹಾಗೂ ಸೇವಾ ಸಂಸ್ಥೆಗಳು ಈ ಯೋಜನೆಯಡಿ ಸೇವಾದಾರರಾಗಿ ನೋಂದಣಿ ಮಾಡಿಕೊಳ್ಳಬಹುದು.
ಜಿಪಿಎಸ್ ಛಾಯಾಚಿತ್ರದ ದೃಢೀಕರಣ : ಯೋಜನೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈತರು ಆ್ಯಪ್ ಮೂಲಕ ಸೇವೆ ಬುಕ್ ಮಾಡಿದ ನಂತರ ನೋಂದಾಯಿತ ಸೇವಾದಾರರು ರೈತರ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಸಂದರ್ಭದಲ್ಲಿ ಮೂರು ಹಂತಗಳಲ್ಲಿ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ತೆಗೆದು ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಈ ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿಸಿದ ಬಳಿಕ ಅರ್ಹ ರೈತರ ಖಾತೆಗೆ ಪ್ರೋತ್ಸಾಹಧನ ನೇರವಾಗಿ ಜಮೆಯಾಗಲಿದೆ.
ಯೋಜನೆಯನ್ನು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಎಚ್.ಡಿ.ಕೋಟೆ ಮತ್ತು ಮೈಸೂರು ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ತಾಲೂಕಿನಲ್ಲಿರುವ ಟ್ರಾೃಕ್ಟರ್ ಮಾಲೀಕರು ಹಾಗೂ ಇತರ ಕೃಷಿ ಯಂತ್ರೋಪಕರಣಗಳನ್ನು ಹೊಂದಿರುವ ರೈತರು ಸೇವಾದಾರರಾಗಿ ನೋಂದಣಿ ಮಾಡಿಕೊಂಡು ಇತರ ರೈತರಿಗೆ ಬಾಡಿಗೆ ಆಧಾರದಲ್ಲಿ ಸೇವೆ ಒದಗಿಸಬಹುದು. ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಇಚ್ಛಿಸುವ ರೈತರು ಹಾಗೂ ಕೃಷಿ ಯಂತ್ರೋಪಕರಣಗಳ ಮಾಲೀಕರು ಹೆಚ್ಚಿನ ಮಾಹಿತಿ ಮತ್ತು ನೋಂದಣಿ ಪ್ರಕ್ರಿಯೆಗಾಗಿ ಎಚ್.ಡಿ.ಕೋಟೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.