ರಸ್ತೆ ಬದಿ ಗುಂಡಿಗೆ ಬಿದ್ದ ಬೈಕ್ ಸವಾರ ಸಾವು

ಪತ್ನಿಗೆ ತೀವ್ರ ಗಾಯ
ಕೆ.ಆರ್.ನಗರ: ತಾಲೂಕಿನ ಚೀರ‌್ನಹಳ್ಳಿ ಗ್ರಾಮದ ಬಳಿ ಮುಖ್ಯರಸ್ತೆ ಬದಿ ಅವೈಜ್ಞಾನಿಕವಾಗಿ ತೆಗೆದಿದ್ದ ಗುಂಡಿಗೆ ಬಿದ್ದ ದಂಪತಿ ಪೈಕಿ ಪತಿ ಮೃತಪಟ್ಟಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಜನಹಳ್ಳಿಯ ಮಂಜುನಾಥ್ ಚಿಕಿತ್ಸೆ ಲಿಸದೆ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕುಟುಂಬಸ್ಥರು ಕೆ.ಆರ್. ತಾಲೂಕು ಪಂಚಾಯಿತಿ ಮುಂದೆ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ತಾಲೂಕು ಅಧ್ಯಕ್ಷ ಎಚ್.ಸಿ.ಕುಮಾರ್, ವಕ್ತಾರ ಕೆ.ಎಲ್.ರಮೇಶ್ ಇನ್ನಿತರರು ಇದ್ದರು.
Published on: 

ಕೆ.ಆರ್.ನಗರ: ತಾಲೂಕಿನ ಚೀರ‌್ನಹಳ್ಳಿ ಗ್ರಾಮದ ಬಳಿ ಮುಖ್ಯರಸ್ತೆ ಬದಿ ಅವೈಜ್ಞಾನಿಕವಾಗಿ ತೆಗೆದಿದ್ದ ಗುಂಡಿಗೆ ಬಿದ್ದ ದಂಪತಿ ಪೈಕಿ ಪತಿ ಮೃತಪಟ್ಟಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮದ ಮಂಜುನಾಥ್(42)ಮೃತ. ಪತ್ನಿ ಮಮತಾ (32)ತೀವ್ರ ಗಾಯಗೊಂಡಿದ್ದಾರೆ.

ದಂಪತಿ ಬೈಕಿನಲ್ಲಿ ಚೀರ‌್ನಹಳ್ಳಿ ಗ್ರಾಮದ ಬಳಿ ಹೆಬ್ಬಾಳು ಗ್ರಾಮದ ಸಂಬಂಧಿಕರ ಗೃಹಪ್ರವೇಶಕ್ಕೆ ಬುಧವಾರ ರಾತ್ರಿ ತೆರಳುತ್ತಿದ್ದಾಗ ಎದುರಿನಿಂದ ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಬದಿಗೆ ಬಂದಾಗ ಗುಂಡಿಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇಬ್ಬರನ್ನೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಜುನಾಥ್ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟರು. ಗಂಭೀರ ಗಾಯಗೊಂಡಿರುವ ಮಮತಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕುಟುಂಬಸ್ಥರ ಪ್ರತಿಭಟನೆ:

ಘಟನೆ ಬೆನ್ನಲ್ಲೇ ಸಿಟ್ಟಿಗೆದ್ದ ಕುಟುಂಬಸ್ಥರು, ಸಂಬಂಧಿಕರು ಹಾಗೂ ಜೆಡಿಎಸ್ ಮುಖಂಡರು ಈ ಘಟನೆಗೆ ಚಂದಗಾಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯ ಕಾರಣವಾಗಿದ್ದು, ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮೃತಪಟ್ಟ ಮಂಜುನಾಥನ ಕುಟುಂಬಕ್ಕೆ ಪರಿಹಾರ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಮತಾಳ ಚಿಕಿತ್ಸೆ ವೆಚ್ಚವನ್ನು ಭರಿಸಬೇಕೆಂದು ಆಗ್ರಹಿಸಿ ತಾಲೂಕು ಪಂಚಾಯಿತಿ ಮುಂದೆ ****ಶವದ ಸಮೇತ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕಾಗಮಿಸಿದ ಶಾಸಕ ಡಿ.ರವಿಶಂಕರ್, ಪ್ರತಿಭಟನಾಕಾರರು ಹಾಗೂ ಮೃತ ಸಂಬಂಧಿಕರ ಜತೆ ಮಾತನಾಡಿದ್ದು, ಕುಟುಂಬಕ್ಕೆ ಸರ್ಕಾರದ ವತಿಯಿಂದ ಐದು ಲಕ್ಷ ರೂ.ಪರಿಹಾರ ಹಾಗೂ ಮಮತಾಳಿಗೆ ವೈಯಕ್ತಿಕವಾಗಿ ಚಿಕಿತ್ಸೆಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜತೆಗೆ, ಘಟನೆಗೆ ಕಾರಣರಾದ ಸಂಬಂಧಪಟ್ಟ ವಾಟರ್‌ಮನ್ ವಿರುದ್ಧ ಕಾನೂನು ಕ್ರಮಕ್ಕಾಗಿ ತಾಲೂಕು ಪಂಚಾಯಿತಿ ಇಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಎಲ್ಲ ಪಿಡಿಒ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಆದಾಗ್ಯೂ, ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಹಾಗೂ ಜೆಡಿಎಸ್ ಮುಖಂಡರು ಬಿಡಾರ ಹೂಡಿ ಬೆಂಬಲಿಗರೊಂದಿಗೆ ಪ್ರತಿಭಟಿಸಿ, ಮೃತರ ಕುಟುಂಬಕ್ಕೆ 5 ಲಕ್ಷ ರೂ., ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಮತಾಳಿಗೆ 5 ಲಕ್ಷ ರೂ. ಸೇರಿ ಒಟ್ಟು 10 ಲಕ್ಷ ರೂ. ಪರಿಹಾರವನ್ನು ಸ್ಥಳದಲ್ಲೇ ನೀಡಬೇಕೆಂದು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಇಒ ವಿ.ಪಿ.ಕುಲದೀಪ್, ಚಂದಗಾಲು ಗ್ರಾಪಂ ಪಿಡಿಒ ಸಂತೋಷ್, ಮೈಸೂರು ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಚಿದಾನಂದ್, ರಾಜ್ಯ ಪರಿಷತ್ ಸದಸ್ಯ ಶಿವಣ್ಣ ಆಗಮಿಸಿ ವಾಸ್ತವ ಪರಿಸ್ಥಿತಿಯನ್ನು ಪ್ರತಿಭಟನಾಕಾರರಿಗೆ ತಿಳಿಸಿದರು.

ಆದರೆ, ಯಾವುದಕ್ಕೂ ಒಪ್ಪದ ಪ್ರತಿಭಟನಕಾರರು, ಕಾಮಗಾರಿ ಮಾಡುವಾಗ ಮುಂಜಾಗ್ರತಾ ಕ್ರಮ ವಹಿಸದಿರುವುದು ದೋಷವಾಗಿದ್ದು, ಪರಿಹಾರ ನೀಡಲೇಬೇಕೆಂದು ಆಗ್ರಹಿಸಿದ್ದು, ನಂತರ ಸರ್ಕಾರದಿಂದ ಐದು ಲಕ್ಷ ರೂ.ಹಾಗೂ ಜಿಲ್ಲಾ ಮಟ್ಟದ ಪಿಡಿಒಗಳ ಸಂಘದ ವತಿಯಿಂದ ಐದು ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿ ಸ್ಥಳದಲ್ಲಿಯೇ 1 ಲಕ್ಷ ರೂ.ಪರಿಹಾರ ಹಾಗೂ ಉಳಿದ 9 ಲಕ್ಷ ರೂ.ಚೆಕ್ ನೀಡಿದರು.

ನಂತರ ಪ್ರತಿಭಟನೆ ಕೈಬಿಟ್ಟು ಮೃತದೇಹವನ್ನು ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮಕ್ಕೆ ಅಂತ್ಯಕ್ರಿಯೆಗೆ ತೆಗೆದುಕೊಂಡು ತೆರಳಿದರು.

ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ತಾಲೂಕು ಅಧ್ಯಕ್ಷ ಎಚ್.ಸಿ.ಕುಮಾರ್, ವಕ್ತಾರ ಕೆ.ಎಲ್.ರಮೇಶ್, ಪುರಸಭಾ ಮಾಜಿ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಸಂತೋಷ್‌ಗೌಡ, ಕೆ.ಎಲ್.ಕುಮಾರ್, ಜೆಡಿಎಸ್ ಮುಖಂಡರಾದ ಅಂಕನಹಳ್ಳಿತಿಮ್ಮಪ್ಪ, ಜಲೇಂದ್ರ, ಅನೀಫ್‌ಗೌಡ, ಹಂಪಾಪುರಸುರೇಶ್, ರುದ್ರೇಶ್, ದ್ರಾಕ್ಷಾಯಿಣಿ, ರಾಜಲಕ್ಷ್ಮೀ, ಆಕಾಶ್‌ಬಾಬು, ವಿಜಯಕುಮಾರ್, ಡಿ.ಆರ್.ರಮೇಶ್ ಪಾಲ್ಗೊಂಡಿದ್ದರು.