ಮೈಸೂರು ದಸರಾದಲ್ಲಿ ಕಂಬಳ ತಾಲೀಮು ಭರ್ಜರಿ

18, 19ರಂದು ಆಯೋಜನೆ ಸಾತಗಳ್ಳಿಯ ವಿಟಿಯು ಪ್ರಾದೇಶಿಕ ಕೇಂದ್ರ ಬಳಿ ಟ್ರಾೃಕ್ ನಿರ್ಮಾಣ ಕೋಣಗಳಿಗೆ ಮಸಾಜ್, ವಿಶೇಷ ಆಹಾರ ಮಂಗಳೂರು ಭಾಗದ ತಿಂಡಿ, ತಿನಿಸಿನ ಮಳಿಗೆಗೆ ಅವಕಾಶ
ಮೈಸೂರು ದಸರಾದಲ್ಲಿ ಕಂಬಳ ತಾಲೀಮು ಭರ್ಜರಿ
ಮೈಸೂರು ದಸರಾದಲ್ಲಿ ಕಂಬಳದ ಕೋಣಗಳ ಅಭ್ಯಾಸದ ಓಟVigorous Kambala training at Mysore Dasara
Published on: 

ಮೈಸೂರು: ದಸರಾದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಕಂಬಳದ ತಾಲೀಮು ಗುರುವಾರ ಶುರುವಾಯಿತು. ಈ ಮೂಲಕ ಕರಾವಳಿ ಈ ಕ್ರೀಡೆಗಾಗಿ ಕೋಣಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಸಾತಗಳ್ಳಿಯ ವಿಟಿಯು ಪ್ರಾದೇಶಿಕ ಕೇಂದ್ರ ಬಳಿ ನಿರ್ಮಾಣಗೊಂಡಿರುವ ಕಂಬಳದ ಟ್ರ್ಯಾಕ್(ಕರೆ) ‘ವಿಜಯ-ದಶಮಿ’ಯಲ್ಲಿ ಜೋಡಿ ಕೋಣಗಳು ಶರವೇಗದಲ್ಲಿ ಓಡಿದವು.

ಮಂಗಳೂರಿನ ಮುಚ್ಚೂರು ಕಲ್ಕುಡೆಯ ಕುಶಾಲ ಲೋಕೇಶ್ ಶೆಟ್ಟಿ ಅವರ ಪೋಲಿ(6)-ಪುಟ್ಟು(13), ರಂಗ(8)-ಬಿಲ್ಲ(8) ಜೋಡಿ ಕೋಣಗಳು ಇಲ್ಲಿ ಬೀಡುಬಿಟ್ಟಿವೆ. ಕಂಬಳಕ್ಕಾಗಿ ಕೋಣಗಳನ್ನು ಅಣಿ ಮಾಡಲಾಗುತ್ತಿದೆ.

ಮಧ್ಯಾಹ್ನ 12.30ರಿಂದ 3 ಗಂಟೆವರೆಗೂ ನಾಲ್ಕು ಬಾರಿ ಎರಡೂ ಟ್ರ್ಯಾಕ್‌ನಲ್ಲೂ ಕಂಬಳದ ಕೋಣಗಳ ಪ್ರಾಯೋಗಿಕವಾಗಿ ಓಟ ನಡೆಯಿತು. ಪರೀಕ್ಷಾರ್ಥ ಓಟ ವಿಚಾರ ತಿಳಿದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು, ಆಸಕ್ತರು ಮಕ್ಕಳೊಂದಿಗೆ ದೌಡಾಯಿಸಿ ರೋಚಕ ದೃಶ್ಯ ಕಣ್ತುಂಬಿಕೊಂಡರು.

ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ:

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇನ್ನಿತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು. ಕೋಣಗಳ ಓಟದ ಆರಂಭ ಸ್ಥಳ, ಟ್ರ್ಯಾಕ್, ವೇದಿಕೆ ಸ್ಥಳ, ಪಾರ್ಕಿಂಗ್ ಸ್ಥಳ, ಕೋಣ ಕಟ್ಟಿ ಹಾಕುವ ಸ್ಥಳ ಸೇರಿದಂತೆ ವಿವಿಧ ವ್ಯವಸ್ಥೆ ವೀಕ್ಷಿಸಿ, ಹಲವು ಸೂಚನೆ ನೀಡಿದರು.

ಕಂಬಳ ಉಪಸಮಿತಿಯ ಕಾರ್ಯಾಧ್ಯಕ್ಷ ಭೀಮಪ್ಪ ಲಾಳಿ, ಕಾರ್ಯದರ್ಶಿ ಪದ್ಮನಾಭ್, ಸಹ ಕಾರ್ಯದರ್ಶಿ ಮೈತ್ರಿ, ಎಸಿಎಫ್ ಗಿರೀಶ್ ಇತರರು ಇದ್ದರು.

ಕಾಯ್ದು ಸುಸ್ತಾದ ಜನರು:

ಕೋಣಗಳ ಪರೀಕ್ಷಾರ್ಥ ಓಟ ವೀಕ್ಷಿಸಲು ಸಾಕಷ್ಟು ಜನರು ಸೇರಿದ್ದರು. ಆದರೆ, ಪುತ್ತೂರು ಶಾಸಕ ಅಶೋಕ್ ರೈ ಬರುವವರೆಗೂ ಪರೀಕ್ಷಾರ್ಥ ಓಟ ಶುರು ಮಾಡುವುದಿಲ್ಲ ಎಂದು ತಿಳಿಸಲಾಯಿತು. ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಾಗಿದ್ದ ಇದು ಮಧ್ಯಾಹ್ನ 12.30ವರೆಗೂ ಆರಂಭವಾಗಲಿಲ್ಲ. ಇದರಿಂದ ಸಾಕಷ್ಟು ಜನರು ಕಾಯ್ದು ಸಾಕಾಗಿ ಮನೆಯತ್ತ ವಾಪಸಾದರು. 2 ತಾಸಿನ ಬಳಿಕ ಅಶೋಕ್ ರೈ ಅವರು ಕೋಣಗಳಿಗೆ ಪೂಜೆ ಮಾಡಿದ ಬಳಿಕ ಓಟ ನಡೆಯಿತು.

ಕಂಬಳ ವೀಕ್ಷಣೆಗೆ ಟಿಕೆಟ್ ಇರಲ್ಲ

ಅ.18, 19ರಂದು ನಡೆಯುವ ದಸರಾ ಕಂಬಳ ಉತ್ಸವಕ್ಕೆ ದಕ್ಷಿಣ ಕನ್ನಡ, ಮಂಗಳೂರು, ಪುತ್ತೂರು, ಮೂಡುಬಿದಿರೆ, ಕಾರ್ಕಳ ಸೇರಿದಂತೆ ವಿವಿಧೆಡೆಯಿಂದ 150 ಜೋಡಿ ಕಂಬಳ ಕೋಣಗಳು ಬರಲಿವೆ. ಕಂಬಳ ವೀಕ್ಷಣೆಗೆ ಯಾವುದೇ ಟಿಕೆಟ್ ಅಥವಾ ಪಾಸ್ ಇರಲ್ಲ. ಜನ ಮುಕ್ತವಾಗಿ ಬಂದು ಕಂಬಳ ವೀಕ್ಷಿಸಬಹುದು. ಈ ಸ್ಥಳದಲ್ಲಿ ಮಂಗಳೂರು ಭಾಗದ ತಿಂಡಿ, ತಿನಿಸಿನ ಮಳಿಗೆಗಳೂ ಇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net