ಮೈಸೂರು: ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ವತಿಯಿಂದ ಶಾಲಾ ಕಾಲೇಜು ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಮತ್ತು ಜೇಡಿ ಮಣ್ಣಿನ ಶಿಲ್ಪ ರಚನೆ ಸ್ಪರ್ಧೆಯನ್ನು ಅ.13 ರಂದು ಮಧ್ಯಾಹ್ನ 2ಕ್ಕೆ ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಅ.14ರಂದು ಬಹುಮಾನ ವಿತರಿಸಲಾಗುತ್ತದೆ.
1ರಿಂದ 4, 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ, 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೇಡಿ ಮಣ್ಣಿನ ಕಲಾಕೃತಿ ರಚನಾ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಸ್ಥಳದಲ್ಲೇ ಮಧ್ಯಾಹ್ನ 2ರಿಂದ 3ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಒಬ್ಬ ವಿದ್ಯಾರ್ಥಿಯು ಒಂದು ವಿಭಾಗದ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.
ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆಯನ್ನು ಅ.13ರಂದು ಬೆಳಗ್ಗೆ 7ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ.
ಆಸಕ್ತ ಮಹಿಳೆಯರು ಅ.12ರ ಒಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಾದ ಬನ್ನಿಮಂಟಪ, ವಿಜಯನಗರ 2ನೇ ಹಂತದಲ್ಲಿರುವ ಗ್ರಾಮಾಂತರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ದಸರಾ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಮೂರು ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದೆ.
ಅ.15ರಂದು ಪಾರಂಪರಿಕ ನಡಿಗೆ ನಡೆಯಲಿದ್ದು, 300 ಜನರಿಗೆ ಅವಕಾಶ ನೀಡಲಾಗುತ್ತದೆ. ಅ.16ರಂದು ಪಾರಂಪರಿಕ ಸೈಕಲ್ ಸವಾರಿ ನಡೆಯಲಿದ್ದು, 15 ರಿಂದ 50 ವರ್ಷ ವಯೋಮಿತಿಯ ಆಸಕ್ತರಲ್ಲಿ ಮೊದಲ 100 ಜನರಿಗೆ ಇ-ಸೈಕಲ್ ನೀಡಲಾಗುತ್ತದೆ.
ನಂತರದವರು ಸ್ವಂತ ಸೈಕಲ್‌ನೊಂದಿಗೆ ಭಾಗವಹಿಸಬಹುದು. ಹಾಗೆಯೇ, ಅ.17ರಂದು ಪಾರಂಪರಿಕ ಉಡುಪಿನಲ್ಲಿ ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿ ಹಮ್ಮಿಕೊಳ್ಳಲಾಗಿದ್ದು, 25ರಿಂದ 55 ವಯೋಮಿತಿಯ ಮೊದಲ ನೋಂದಾಯಿತ 50 ಜೋಡಿಗಳಿಗೆ ಅವಕಾಶವಿರುತ್ತದೆ.
ಈ ಮೂರೂ ಕಾರ್ಯಕ್ರಮಗಳು ಬೆಳಗ್ಗೆ 7ಕ್ಕೆ ರಂಗಾಚಾರ್ಲು ಪುರಭವನದಿಂದ (ಟೌನ್‌ಹಾಲ್) ಪ್ರಾರಂಭವಾಗಿ ನಗರದ ಪ್ರಮುಖ ಪಾರಂಪರಿಕ ರಸ್ತೆಗಳು, ಕಟ್ಟಡಗಳ ಮಾರ್ಗವಾಗಿ ಸಾಗಿ ಪುರಭವನದ ಬಳಿಯೇ ಮುಕ್ತಾಯಗೊಳ್ಳಲಿವೆ.
ಆಸಕ್ತರು ಅ.10 ರೊಳಗಾಗಿ ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಉಪ ನಿರ್ದೇಶಕರ ಕಚೇರಿಯಲ್ಲಿ ನೇರವಾಗಿ ಅಥವಾ ಇ-ಮೇಲ್ ಮೂಲಕ ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.