ಮೈಸೂರು ದಕ್ಷಿಣ ವಲಯ ಡಿಐಜಿಪಿಯಾಗಿ ಎಂ.ಪುಟ್ಟಮಾದಯ್ಯ ಅಧಿಕಾರ ಸ್ವೀಕಾರ

 ಮೈಸೂರು ದಕ್ಷಿಣ ವಲಯ ಡಿಐಜಿಪಿಯಾಗಿ ಎಂ.ಪುಟ್ಟಮಾದಯ್ಯ ಅಧಿಕಾರ ಸ್ವೀಕಾರ
ಮೈಸೂರು ದಕ್ಷಿಣ ವಲಯದ ನೂತನ ಡಿಐಜಿಪಿ ಎಂ.ಪುಟ್ಟಮಾದಯ್ಯ ಅವರನ್ನು ಎಸ್‌ಪಿಗಳಾದ ಮೈಸೂರಿನ ಮಲ್ಲಿಕಾರ್ಜುನ ಬಾಲದಂಡಿ, ಚಾಮರಾಜನಗರದ ಮುತ್ತುರಾಜು, ಮಂಡ್ಯದ ಶೋಭಾರಾಣಿ ಸ್ವಾಗತಿಸಿ, ಅಭಿನಂದಿಸಿದರು.M. Puttamadayya assumes charge as DIGP of the Mysuru Southern Range.
Published on: 

ಮೈಸೂರು: ಮೈಸೂರು ದಕ್ಷಿಣ ವಲಯದ ನೂತನ ಪೊಲೀಸ್ ಉಪ ಮಹಾನಿರೀಕ್ಷಕರಾಗಿ (ಡಿಐಜಿಪಿ) ಎಂ.ಪುಟ್ಟಮಾದಯ್ಯ ಗುರುವಾರ ಅಧಿಕಾರ ಸ್ವೀಕರಿಸಿದರು.

ಈ ಹುದ್ದೆಯಲ್ಲಿದ್ದ ಡಾ. ಎಂ.ಬಿ.ಬೋರಲಿಂಗಯ್ಯ ಅವರನ್ನು ಬೆಂಗಳೂರು ನಗರ(ಉತ್ತರ)ದ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು, ತೆರವಾಗಿರುವ ಈ ಸ್ಥಾನಕ್ಕೆ ಮೈಸೂರು ಮೂಲದವರನ್ನು ನೇಮಕ ಮಾಡಲಾಗಿದೆ.

ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ನೂತನ ಡಿಐಜಿಪಿಯನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ, ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.

ಎಂ.ಪುಟ್ಟಮಾದಯ್ಯ ಅವರು ತಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಹೊಸಕುಕ್ಕೂರು ಗ್ರಾಮದವರು. ರಾಜ್ಯ ಪೊಲೀಸ್ ಸೇವೆಯಿಂದ ಬಡ್ತಿ ಪಡೆದು 2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆರಂಭದಲ್ಲಿ ರಾಯಚೂರು ಎಸ್‌ಪಿ ಆಗಿ, ಬೆಂಗಳೂರಿನ ಲೋಕಾಯುಕ್ತ ವಿಶೇಷ ತನಿಖಾ ದಳದಲ್ಲಿ ಎಸ್‌ಪಿ ಆಗಿ, ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಡಿಐಜಿಪಿ, ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದಾರೆ.